ರೇಣುಕಾಸ್ವಾಮಿ ಕೊಲೆ ಕೇಸ್ – ಇಂದಿನಿಂದ ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ಆರಂಭ!

ಬೆಂಗಳೂರು : ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ವಿಚಾರಣೆ ಇಂದಿನಿಂದ ಸೆಷನ್ಸ್‌ ಕೋರ್ಟ್‌ನಲ್ಲಿ ಶುರುವಾಗಲಿದೆ. ಈ ಪ್ರಕರಣದ ಟ್ರಯಲ್ ಇಂದಿನಿಂದ ಸೆಷನ್ಸ್ ಕೋರ್ಟ್‌ನಲ್ಲಿ ಚುರುಕುಗೊಳ್ಳಲಿದ್ದು, ದಿನನಿತ್ಯದ ಆಧಾರದ ಮೇಲೆ ವಿಚಾರಣೆ ನಡೆಯಲಿದೆ.

ಇತ್ತೀಚೆಗೆ ನಟ ದರ್ಶನ್ ಜಾಮೀನು ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಇಂದಿನಿಂದ ಸರಿಯಾಗಿ ಒಂದು ವರ್ಷದೊಳಗೆ ಸಂಪೂರ್ಣ ಟ್ರಯಲ್ ಮುಗಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಈ ಮಹತ್ವದ ಆದೇಶದ ಪ್ರತಿಯನ್ನು ಆರೋಪಿ ದರ್ಶನ್ ಪರ ವಕೀಲರು ಇದೀಗ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಕೋರ್ಟ್​ ಸೂಚನೆಯಂತೆ ಒಂದು ವರ್ಷದೊಳಗೆ ಈ ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಸಾಕ್ಷಿಗಳನ್ನು ಪದೇ ಪದೇ ವಿಚಾರಣೆಗೆ ಒಳಪಡಿಸಿ ಸಮಯ ವ್ಯರ್ಥ ಮಾಡುವಂತಿಲ್ಲ. ಇನ್ನು ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳ್ಳದಿದ್ದರೆ ಜಾಮೀನು ನೀಡುವುದನ್ನು ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುವಂತೆ ಟ್ರಯಲ್ ಕೋರ್ಟ್‌ಗೆ ಸೂಚಿಸಿದೆ.

ಸುಪ್ರೀಂಕೋರ್ಟ್ ಆದೇಶದ ಪ್ರತಿಯನ್ನು ಈಗಾಗಲೇ 57ನೇ ಸಿಸಿಹೆಚ್ ಕೋರ್ಟ್‌ಗೆ ಸಲ್ಲಿಸಲಾಗಿದ್ದು, ನ್ಯಾಯಾಧೀಶರು ಶೀಘ್ರ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ಪರ ವಕೀಲರಿಗೆ ನಿರ್ದೇಶನ ನೀಡಿದ್ದಾರೆ.

ಈವರೆಗೂ ಈ ಪ್ರಕರಣದ ವಿಚಾರಣೆ 64ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಆದರೆ, ಇಂದಿನಿಂದ ಸಾಕ್ಷ್ಯ ವಿಚಾರಣೆಯು 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮುಂದುವರಿಯಲಿದೆ. ಸೆಷನ್ಸ್ ಕೋರ್ಟ್ ಇಂದು ಇಬ್ಬರು ಸಾಕ್ಷಿಗಳಿಗೆ ಸಮನ್ಸ್ ನೀಡಿದ್ದು, ಈವರೆಗೆ ಒಟ್ಟು 12 ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿದೆ. ಕಳೆದ ವಾರವಷ್ಟೇ ಇಬ್ಬರು ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.

ಇದನ್ನೂ ಓದಿ : ರಾಗಿಣಿ ದ್ವಿವೇದಿ ಹುಟ್ಟುಹಬ್ಬದಂದು “ರಾಗಿಣಿ ಐಪಿಎಸ್ 2” ಚಿತ್ರಕ್ಕೆ ಚಾಲನೆ!

Btv Kannada
Author: Btv Kannada

Leave a Comment

Read More

Read More