ಕನ್ನಡ ಚಿತ್ರರಂಗ ಕಂಡ ಅದ್ಭುತ ಜೋಡಿ ಎಂದರೆ ರವಿಚಂದ್ರನ್ ಮತ್ತು ಹಂಸಲೇಖ ಅವರದ್ದು. 80-90ರ ದಶಕದಲ್ಲಿ ರವಿಚಂದ್ರನ್ ನಿರ್ದೇಶನದ ಮತ್ತು ಹಂಸಲೇಖ ಸಂಗೀತ ನಿರ್ದೇಶನದ ಚಿತ್ರಗಳು ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದ್ದು ಎಲ್ಲರಿಗೂ ತಿಳಿದ ವಿಷಯ. ಹದಿನಾರು ವರ್ಷಗಳ ಕಾಲ ಒಟ್ಟಾಗಿ ಈ ಜೋಡಿ ಮಾಡಿದ ಮೋಡಿಗೆ ಮನ ಸೋಲದವರಿಲ್ಲ. ಇಂತಹ ದಿಗ್ಗಜ ಜೋಡಿಯ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ ಮೇ 30ರಂದು ಕೆಂಗೇರಿ ಬಳಿಯ ಜೆ.ಕೆ.ಗ್ರಾಂಡ್ ಅರೆನಾದಲ್ಲಿ “ಕ್ರೇಜಿ – ಬ್ರಹ್ಮ” ರೀಯೂನಿಯನ್ ಮೆಗಾ ಇವೆಂಟ್ ಅನ್ನು ಪ್ರಸ್ತುತತ್ ಇನ್ನೋವೇಟಿವ್ ಕ್ರಿಯೇಷನ್ಸ್ ಮತ್ತು ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕ ನ.ವಿನಯ್ ಹಾಗೂ ಕಲಾಲೂಹ ಸಂಸ್ಥಾಪಕಿ ಡಾ.ಚೇತನಾ ಆರ್.ಎಸ್ ಅವರು ಆಯೋಜಿಸಿದ್ದಾರೆ.

ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಹದಿನಾರು ವರ್ಷಗಳ ಕಾಲ ಒಟ್ಟಾಗಿ ಮಾಡಿರುವ ಕಲಾಸೇವೆಯನ್ನು ನೆನಪು ಮಾಡಿಕೊಂಡು, ಆ ಜೋಡಿಯನ್ನು ಗೌರವಿಸುವ ಸಮಾರಂಭವೇ “ಕ್ರೇಜಿ – ಬ್ರಹ್ಮ”. ಮೇ.30 ರ ಸಂಜೆ 6 ಗಂಟೆಗೆ ಕೆಂಗೇರಿ ಬಳಿಯ ಜೆಕೆ ಗ್ರಾಂಡ್ ಅರೇನಾದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು 8000 ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಸಮಾರಂಭಕ್ಕೆ ಆಗಮಿಸಲು ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಜನ ಸಾಮಾನ್ಯರಿಗೆ ಹೊರೆ ಆಗದಂತೆ ಟಿಕೆಟ್ ದರ ಇರುತ್ತದೆ. ವಿ.ಐ.ಪಿ ಟಿಕೆಟ್ ಗಳು ಸಹ ಲಭ್ಯವಿರುತ್ತದೆ. ಬುಕ್ ಮೈ ಶೋನಲ್ಲಿ ಟಿಕೆಟ್ ದೊರೆಯುತ್ತದೆ. ನಾಡಿನ ಹೆಸರಾಂತ ಕಲಾವಿದರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಾಲ್ಕು ಗಂಟೆಗಳ ವಿಶೇಷ ಕಾರ್ಯಕ್ರಮ ಇದ್ದಾಗಿದ್ದು, ರವಿಚಂದ್ರನ್ ಹಾಗೂ ಹಂಸಲೇಖ ಅವರು ಎಲ್ಲರನ್ನೂ ಉದ್ದೇಶಿಸಿ ಮಾತನ್ನಾಡಲಿದ್ದಾರೆ. ಬಂದವರಿಗೆ ಪಾರ್ಕಿಂಗ್ ನಿಂದ ಹಿಡಿದು ಎಲ್ಲಾ ವ್ಯವಸ್ಥೆಯನ್ನು ಯಾವುದೇ ತೊಂದರೆ ಇಲ್ಲದಂತೆ ಮಾಡಲಾಗಿದೆ. ಅಂದು ರವಿಚಂದ್ರನ್ ಅವರ ಹುಟ್ಟುಹಬ್ಬವಿದ್ದು, ದಯವಿಟ್ಟು ಯಾರು ಕೂಡ ಶಾಲು, ಕೇಕ್, ಹಾರ ತರಬಾರದೆಂದು ಮನವಿ ಮಾಡುತ್ತಿದ್ದೇವೆ. ಏಕೆಂದರೆ ವೇದಿಕೆಯ ಮೇಲೆ ಯಾರಿಗೂ ಪ್ರವೇಶವಿರುವುದಿಲ್ಲ. ಸಮಾರಂಭದ ಪೂರ್ವಭಾವಿಯಾಗಿ ರವಿಚಂದ್ರನ್ ಹಾಗೂ ಹಂಸಲೇಖ ಅವರ 80 ಅಡಿ ಕಟೌಟ್ ಅನಾವರಣ ಮಾಡಿದ್ದೇವೆ ಎಂದು ಸಮಾರಂಭದ ಉಸ್ತುವಾರಿ ವಹಿಸಿಕೊಂಡಿರುವ ಆಯೋಜಕ ನ.ವಿನಯ್ ತಿಳಿಸಿದರು. ಆಯೋಜಕಿ ಡಾ.ಚೇತನಾ ಅವರು ಸಹ ಸಮಾರಂಭದ ಕುರಿತು ಕೆಲವು ಮಾಹಿತಿ ನೀಡಿದರು.

ವಿನಯ್ ಹಾಗೂ ಡಾ.ಚೇತನಾ ಅವರು ಸೇರಿ ಒಂದೊಳ್ಳೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಒಂದು ಇವೆಂಟ್. ನಮ್ಮಿಬ್ಬರಿಗೆ ಇದು ವಿದ್ಯಮಾನ. ನಮ್ಮ ಯಜಮಾನರು ಆಗ ಕನಸುಗಾರರಾಗಿದ್ದರು. ಈಗ ಒಳ್ಳೆಯ ಮಾತುಗಾರರಾಗಿದ್ದಾರೆ. ಅವರ ಕಟೌಟ್ ನೋಡಿ ನನಗೆ ಬಹಳ ಖುಷಿಯಾಯಿತು. ಪಕ್ಕದಲ್ಲೇ ನನ್ನ ಕಟೌಟ್ ಸಹ ಹಾಕಿದ್ದಾರೆ. ಅಷ್ಟೇ ಅಲ್ಲದೆ ಎರಡು ಸುಂದರವಾದ ಪ್ರೋಮೊಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಅದು ಬಹಳ ಚೆನ್ನಾಗಿದೆ. ಕಾರ್ಯಕ್ರಮ ಕೂಡ ಇನ್ನೂ ಚೆನ್ನಾಗಿರುತ್ತದೆ. ಎಲ್ಲರೂ ಬನ್ನಿ ಎಂದು ನಾದಬ್ರಹ್ಮ ಹಂಸಲೇಖ ಹೇಳಿದರು.

‘ಕ್ರೇಜಿ ಬ್ರಹ್ಮ’ ಕಾರ್ಯಕ್ರಮದ ಬಗ್ಗೆ ಆಯೋಜಕರು ಹೇಳಿದಾಗ ಕೇಳಿ ಸಂತೋಷವಾಯಿತು. ನನ್ನ ಹಾಗೂ ಹಂಸಲೇಖ ಅವರ ಕಾಂಬಿನೇಶನ್ನಲ್ಲಿ ನೂರಾರು ಸೂಪರ್ ಹಿಟ್ ಹಾಡುಗಳು ಬಂದಿದೆ. “ಪ್ರೇಮಲೋಕದಿಂದ” ಹಿಡಿದು ಹದಿನಾರು ವರ್ಷಗಳ ಕಾಲ ನಮ್ಮಿಬ್ಬರ ಕಾಂಬಿನೇಶನ್ನಲ್ಲಿ ಬಂದ ಹಾಡುಗಳು ಅಂದು, ಇಂದು, ಮುಂದು ಜನಪ್ರಿಯವಾಗಿರುತ್ತದೆ. ಆನಂತರ ನಾವು ಒಟ್ಟಾಗಿ ಸಿನಿಮಾ ಮಾಡದೆ ಇರಬಹುದು. ನನ್ನ ಮನಸ್ಸಿನಲ್ಲಿ ಅವರು. ಅವರ ಮನಸ್ಸನಲ್ಲಿ ನಾನು ಸದಾ ಇರುತ್ತೇವೆ. ಒಂದೇ ದೇಹ ಎರಡು ಜೀವ ಇದ್ದ ಹಾಗೆ. ಇನ್ನೂ ಈ ಸಮಾರಂಭ ಯಾವುದೇ ತೊಂದರೆ ಇಲ್ಲದೆ ನಡೆಯುತ್ತದೆ ಎಂಬ ಭರವಸೆ ಇದೆ. ನಾನು ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸುವುದಿಲ್ಲ. ಅವರು ಬಂದೇ ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ತಿಳಿಸಿದರು.
ಇದನ್ನೂ ಓದಿ : ನಟ ವಿಜಯ ರಾಘವೇಂದ್ರಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ “ಮಹಾನ್” ಚಿತ್ರತಂಡ!









