ರಾಮನಗರ ಡಿಸಿ ಯಶವಂತ್ ವಿ. ಗುರುಕರ್ ವಿರುದ್ಧ ದಿನೇಶ್ ಕಲ್ಲಹಳ್ಳಿ ದೂರು!

ಬೆಂಗಳೂರು : ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ವಿರುದ್ಧ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯ ಸರ್ಕಾರದ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್​ಗೆ ದೂರು ಸಲ್ಲಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಜಿಲ್ಲಾಧಿಕಾರಿಗಳ ವಿರುದ್ಧ ಹಿತಾಸಕ್ತಿ ಸಂಘರ್ಷ, ಅಕ್ರಮ ಭೂ ವ್ಯವಹಾರ, ಬೇನಾಮಿ ಹೂಡಿಕೆ ಹಾಗೂ ಅಖಿಲ ಭಾರತ ಸೇವಾ ನಡಾವಳಿ ನಿಯಮಗಳ ಉಲ್ಲಂಘನೆ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ದೂರಿನಲ್ಲಿ ಏನಿದೆ?

ಭೂ ನೋಂದಣಿ ವ್ಯವಹಾರಗಳು ಹಾಗೂ ಯೋಜನಾ ವ್ಯಾಪ್ತಿಯೊಳಗಿನ ಜಮೀನು ಖರೀದಿ ವಿವರಗಳ ಆಧಾರದ ಮೇಲೆ, ರಾಮನಗರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಯಶವಂತ್ ವಿ. ಗುರುಕರ್ ಅವರ ಅಧಿಕೃತ ಹುದ್ದೆಯ ಪ್ರಭಾವವನ್ನು ದುರುಪಯೋಗಪಡಿಸಿಕೊಂಡು, ಭೂಸ್ವಾಧೀನ ಸಂಬಂಧಿತ ಅಂತರಿಕ ಮಾಹಿತಿಯನ್ನು ಬಳಸಿಕೊಂಡು ಅಕ್ರಮ ಲಾಭ ಗಳಿಸಿರುವ ಕುರಿತು ಗಂಭೀರ ಅನುಮಾನಗಳು ವ್ಯಕ್ತವಾಗಿವೆ.

ಲಭ್ಯ ಮಾಹಿತಿಗಳ ಪ್ರಕಾರ, ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಅರಳಾಸಂದ್ರ ಗ್ರಾಮದ ಸರ್ವೆ ನಂ.121/1ರಲ್ಲಿ 14 ಗುಂಟೆ, ಸರ್ವೆ ನಂ.121/8ರಲ್ಲಿ 30 ಗುಂಟೆ, ಸರ್ವೆ ನಂ.121/9ರಲ್ಲಿ 10 ಗುಂಟೆ, ಕಂಚುಗಾರನಹಳ್ಳಿ ಗ್ರಾಮದ ಸರ್ವೆ ನಂ.247/2ರಲ್ಲಿ 1 ಎಕರೆ, ಸರ್ವೆ ನಂ.161/7ರಲ್ಲಿ 8 ಗುಂಟೆ, ಸರ್ವೆ ನಂ.145ರಲ್ಲಿ 22 ಗುಂಟೆ, ಸರ್ವೆ ನಂ.97/3ರಲ್ಲಿ 21 ಗುಂಟೆ ಹಾಗೂ ಕೆಂಪಯ್ಯನಪಾಳ್ಯ ಗ್ರಾಮದ ಸರ್ವೆ ನಂ.19/7ರಲ್ಲಿ 18 ಗುಂಟೆ ಮತ್ತು ಸರ್ವೆ ನಂ.28/2ರಲ್ಲಿ 11 ಗುಂಟೆ ಸೇರಿದಂತೆ ಅನೇಕ ಜಮೀನುಗಳ ಖರೀದಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ನಿಗದಿ ಹಾಗೂ ಅಭಿವೃದ್ಧಿ ವ್ಯಾಪ್ತಿಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಅಧಿಕೃತ ಮತ್ತು ಪೂರ್ವಗೋಪ್ಯ ಮಾಹಿತಿ ಲಭ್ಯವಿರುವ ಹಿನ್ನೆಲೆಯಲ್ಲಿ, ಆ ಮಾಹಿತಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸಿ ಆತ್ಮೀಯರು, ಸಂಬಂಧಿಕರು, ಸಹಭಾಗಿಗಳ ವಲಯದವರ ಮೂಲಕ ಜಮೀನು ಖರೀದಿ ನಡೆಸಿರುವ ಸಾಧ್ಯತೆಗಳ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ.

ಈ ಪ್ರಕರಣದಲ್ಲಿ ಸಂಬಂಧಿತ ಜಮೀನುಗಳ ಮಾರಾಟ ಪತ್ರಗಳು, ನೋಂದಣಿ ದಾಖಲೆಗಳು, ಎನ್‌ಕಂಬರೆನ್ಸ್ ಸರ್ಟಿಫಿಕೆಟ್ (EC) ವಿವರಗಳು, ಭೂಸ್ವಾಧೀನ ಅಧಿಸೂಚನೆಗಳ ದಿನಾಂಕಗಳು ಹಾಗೂ ಜಮೀನು ಖರೀದಿಗಳ ನಡುವೆ ಇರುವ ಸಮಯ ಸಂಬಂಧವನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಜೊತೆಗೆ, ಜಮೀನು ಖರೀದಿಗೆ ಬಳಸಲಾದ ಹಣದ ಮೂಲ, ಬ್ಯಾಂಕ್ ವ್ಯವಹಾರಗಳು, ಸಂಬಂಧಿತ ವ್ಯಕ್ತಿಗಳು, ಕುಟುಂಬ ಸದಸ್ಯರು, ಆತ್ಮೀಯರು, ಸಹಭಾಗಿಗಳು ಅಥವಾ ಕಂಪನಿಗಳ ನಡುವಿನ ಹಣಕಾಸು ಸಂಪರ್ಕಗಳನ್ನೂ ತನಿಖೆಗೆ ಒಳಪಡಿಸಬೇಕು. ಜಿಲ್ಲಾಧಿಕಾರಿಗಳ ಆಸ್ತಿ ಘೋಷಣೆಗಳು, ಸೇವಾ ದಾಖಲೆಗಳು ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದಿರುವ ಆಸ್ತಿ ವ್ಯವಹಾರಗಳ ಸ್ವರೂಪವನ್ನು ಪರಿಶೀಲಿಸುವುದು ಅಗತ್ಯವಾಗಿದೆ.

ಭ್ರಷ್ಟಾಚಾರ, ಹಿತಾಸಕ್ತಿ ಸಂಘರ್ಷ, ಬೇನಾಮಿ ಹೂಡಿಕೆಗಳ ಅನುಮಾನ, ಸಾರ್ವಜನಿಕ ಹುದ್ದೆಯ ದುರುಪಯೋಗ ಹಾಗೂ ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ಆರ್ಥಿಕ ನಷ್ಟದ ಕುರಿತು ಸಮಗ್ರ ಕಾನೂನು ಪರಿಶೀಲನೆ ನಡೆಸಬೇಕು. ಸಾರ್ವಜನಿಕ ನಂಬಿಕೆ, ರೈತರ ಹಿತಾಸಕ್ತಿ ಹಾಗೂ ಆಡಳಿತಾತ್ಮಕ ನೈತಿಕತೆಯನ್ನು ಕಾಪಾಡುವ ಉದ್ದೇಶದಿಂದ ಈ ದೂರುವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಪೆಟ್ರೋಲ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರು ರಾಜಕಾರಣ ಮಾಡ್ತಿದ್ದಾರೆ – ಆರ್. ಅಶೋಕ್ ಆಕ್ರೋಶ!

Btv Kannada
Author: Btv Kannada

Leave a Comment

Read More

Read More