ಬೆಂಗಳೂರು : ಪ್ರಧಾನಿ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿತ್ತು. ಈ ಸಂಬಂಧ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಗ್ಗಲೀಪುರ ಪೊಲೀಸರು, ತನಿಖೆಗೆ 4 ತಂಡ ರಚನೆ ಮಾಡಿ ವಿವಿಧ ಆಯಾಮಗಳಲ್ಲಿ ವಿಚಾರಣೆ ಆರಂಭಿಸಿದ್ದಾರೆ.
ಬೆಂಗಳೂರು ಹೊರವಲಯದ ಕಗ್ಗಲೀಪುರ ಸಮೀಪ ಇರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ಧ್ಯಾನ ಮಂದಿರ ಉದ್ಘಾಟನೆ ಹಾಗೂ ಸಂಸ್ಥೆಯ 45ನೇ ವಾರ್ಷಿಕೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಿದ ಬಳಿಕ ರಸ್ತೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ.
ಕಗ್ಗಲೀಪುರ ಸಮೀಪದ ತಾತಗುಣಿ ಬಳಿಯ ರಸ್ತೆ ಪಕ್ಕದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಪೊಲೀಸರ ಪರಿಶೀಲನೆ ವೇಳೆ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ತಕ್ಷಣ ಪೊಲೀಸರು ಜಿಲೆಟಿನ್ ಕಡ್ಡಿಗಳನ್ನ ವಶಕ್ಕೆ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಯಕ್ರಮದಿಂದ ಪ್ರಧಾನಿ ಮೋದಿ ತೆರಳಿದ ಬಳಿಕ ಸ್ಥಳಕ್ಕೆ ಸುಕೋ ಟೀಂ ಹಾಗೂ ಎಫ್‌ಎಸ್‌ಎಲ್ ಟೀಂ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇನ್ನು ಪ್ರಕರಣದ ತನಿಖೆಗೆ ರಾಮನಗರ ಡಿವೈಎಸ್ಪಿ ಶ್ರೀನಿವಾಸ್ ನೇತೃತ್ವದಲ್ಲಿ ನಾಲ್ಕು ತಂಡಗಳ ರಚನೆ ಮಾಡಲಾಗಿದ್ದು, 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ಮಾಡಲಾಗುತ್ತಿದ್ದು, ಸ್ಥಳಕ್ಕೆ ಜಿಲೆಟಿನ್ ಕಡ್ಡಿ ಹೇಗೆ ಬಂತು, ಯಾರು ಅದನ್ನ ತಂದು ರಸ್ತೆ ಪಕ್ಕ ಹಾಕಿದ್ದಾರೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೇ ಜಿಲೆಟಿನ್ ಕಡ್ಡಿ ಬಳಸುವ ಕಲ್ಲುಕ್ವಾರಿ ಮಾಲೀಕರು ಹಾಗೂ ಕಾರ್ಮಿಕರ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ. ಜೊತೆಗೆ ಅಕ್ಕಪಕ್ಕದ ಗೋಡೌನ್‌ಗಳನ್ನೂ ತಪಾಸಣೆ ನಡೆಸಿದ್ದಾರೆ.
ಇದನ್ನೂ ಓದಿ : ಎಐ ಆಧಾರಿತ “ಗರುಡ” ಚಿತ್ರದ ಟ್ರೈಲರ್ ರಿಲೀಸ್!









