ಬಳ್ಳಾರಿ : ಕುವೆಂಪು ವಿಶ್ವವಿದ್ಯಾನಿಲಯವು ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಹರ್ಷ ಪಿ.ಎಸ್. ಅವರಿಗೆ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದಲ್ಲಿ ನಡೆಸಿದ ಮಹತ್ವದ ಸಂಶೋಧನೆಗಾಗಿ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿಯನ್ನು ಘೋಷಿಸಿದೆ.
ಮೇ.6ರಂದು ನಡೆಯಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಐಜಿಪಿ ಹರ್ಷ ಪಿ.ಎಸ್. ಅವರಿಗೆ ಅಧಿಕೃತವಾಗಿ ಪದವಿ ಪ್ರದಾನ ಮಾಡಲಾಗುತ್ತದೆ.

ಹರ್ಷ ಪಿ.ಎಸ್. ಅವರು ಕಳೆದ ಐದು ವರ್ಷಗಳಿಂದ ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಪ್ರಾಧ್ಯಾಪಕ ಡಾ.ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರಾಧಾರಿತ ಅಧ್ಯಯನ ನಡೆಸಿದ್ದರು.
“ನಾಗರಹೊಳೆ, ಬಂಡೀಪುರ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಜನಸಂಖ್ಯೆಯ ಸ್ಥಿರತೆಯ ಕುರಿತು ಅಧ್ಯಯನ – ಮಾನವ-ಹುಲಿ ಸಂಘರ್ಷಕ್ಕೆ ವಿಶೇಷ ಉಲ್ಲೇಖದೊಂದಿಗೆ” ಎಂಬ ಶೀರ್ಷಿಕೆಯಡಿಯಲ್ಲಿ ಅವರ ಡಾಕ್ಟರೇಟ್ ಪ್ರಬಂಧ ಸಿದ್ಧಗೊಂಡಿದೆ.
ಈ ಸಂಶೋಧನೆಯಲ್ಲಿ ಹುಲಿಗಳ ಚಲನಶೀಲತೆ, ಜನಸಂಖ್ಯೆಯ ಸ್ಥಿರತೆ, ಸಂರಕ್ಷಿತ ಪ್ರದೇಶಗಳ ಪರಿಸರ ವೈಶಿಷ್ಟ್ಯಗಳು ಹಾಗೂ ಮಾನವ-ಹುಲಿ ಸಂಘರ್ಷದ ಪ್ರಮುಖ ಕಾರಣಗಳ ಕುರಿತು ಸಮಗ್ರ ವಿಶ್ಲೇಷಣೆ ನಡೆಸಲಾಗಿದೆ. ವಿಶೇಷವಾಗಿ ಕ್ಯಾಮೆರಾ ಟ್ರ್ಯಾಪಿಂಗ್, ಸಂಘರ್ಷ ತಾಣಗಳ ಅಧ್ಯಯನ ಹಾಗೂ ಸ್ಥಳೀಯ ಮಾಹಿತಿಯ ಆಧಾರದ ಮೇಲೆ ಸಂಶೋಧನೆ ರೂಪುಗೊಂಡಿದೆ.
ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಈ ಪ್ರಬಂಧವನ್ನು ಅನುಮೋದಿಸಿ ಪಿಎಚ್‌ಡಿ ಪದವಿಯನ್ನು ಘೋಷಿಸಿದೆ.
ಇದನ್ನೂ ಓದಿ : ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ – ಆರೋಪಿ ಶಾರಿಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ!









