ಹುಬ್ಬಳ್ಳಿ : ತಮಿಳುನಾಡು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ಕರೆದಿರುವ ಹಾಗೂ ರಾಹುಲ್ ಗಾಂಧಿ ಅವರ ಅಸಭ್ಯ ಹೇಳಿಕೆಗಳ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರ ಇಂತಹ ನಡವಳಿಕೆಯು ಅವರ “ವಿಕೃತ ಮನಸ್ಥಿತಿ” ಮತ್ತು “ಸೋಲಿನ ಹತಾಶೆ”ಯನ್ನು ಪ್ರತಿಬಿಂಬಿಸುತ್ತದೆ ಎಂದು ಗುಡುಗಿದ್ದಾರೆ.

ಖರ್ಗೆ ಅವರ ಹೇಳಿಕೆ ದ್ವೇಷದ ರಾಜಕಾರಣದ ಪರಮಾವಧಿ : ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ ಪ್ರಲ್ಹಾದ ಜೋಶಿ, “ನಕಲಿ ಗಾಂಧಿ ಕುಟುಂಬದ ಓಲೈಕೆಗಾಗಿ ದಶಕಗಳ ಕಾಲ ದುರಾಡಳಿತ ನಡೆಸಿದ ಮಲ್ಲಿಕಾರ್ಜುನ ಖರ್ಗೆಯವರು, ತಮ್ಮ ಸ್ವಕ್ಷೇತ್ರವನ್ನೇ ಅಭಿವೃದ್ಧಿಪಡಿಸದೆ ಜನರಿಗೆ ದ್ರೋಹ ಬಗೆದಿದ್ದಾರೆ. ಈಗ ದೇಶದ ಹೆಮ್ಮೆಯ ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ತಮ್ಮ ಕೆಳಮಟ್ಟದ ರಾಜಕಾರಣವನ್ನು ಪ್ರದರ್ಶಿಸಿದ್ದಾರೆ. ಇದು ಕೇವಲ ಪ್ರಧಾನಿಯವರಿಗೆ ಮಾಡಿದ ಅವಮಾನವಲ್ಲ, ಬದಲಾಗಿ ಇಡೀ ದೇಶದ ಜನತೆಗೆ ಬಗೆದ ದ್ರೋಹವಾಗಿದೆ,” ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿಯ ಮಾತುಗಳು ಬಾಲಿಶತನದ ಪರಮಾವಧಿ : ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಪ್ರಧಾನಿ ಮೋದಿ ನನ್ನನ್ನು ನೋಡಿ ಭಯಪಡುತ್ತಾರೆ” ಎಂಬ ಹೇಳಿಕೆಯನ್ನು ಟೀಕಿಸಿದ ಜೋಶಿ, “ಇದು ರಾಹುಲ್ ಗಾಂಧಿಯವರ ದುರಹಂಕಾರದ ಪರಮಾವಧಿ. ಸಾರ್ವಜನಿಕ ಬದುಕಿನಲ್ಲಿ ಘನತೆ ಮತ್ತು ಸಂಸ್ಕಾರ ಬಹುಮುಖ್ಯ. ಆದರೆ ರಾಹುಲ್ ಗಾಂಧಿಯವರ ಅಸಡ್ಡೆ ಹಾಗೂ ಅನಾಗರಿಕ ಮಾತುಗಳು ಅವರ ನೈಜತೆಯನ್ನು ಬಯಲು ಮಾಡಿದೆ. ದೇಶದಾದ್ಯಂತ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದರೂ, ಅಸಭ್ಯ ರಾಜಕಾರಣ ಮಾಡುವುದನ್ನು ಮಾತ್ರ ಅವರು ಬಿಟ್ಟಿಲ್ಲ,” ಎಂದು ಟೀಕಿಸಿದರು.

ಕಾಂಗ್ರೆಸ್ ಸಿದ್ಧಾಂತಕ್ಕೆ ಹಿಡಿದ ಕನ್ನಡಿ : “ಶತಕಗಳ ಸೋಲಿನ ಹೊಸ್ತಿಲಿನಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭೀತಿ ಎದುರಾಗಿದೆ. ಈ ಹತಾಶೆಯಿಂದಲೇ ಪ್ರಧಾನಮಂತ್ರಿಯವರ ಬಗ್ಗೆ ಇಂತಹ ಕೀಳು ಮಟ್ಟದ ಹೋಲಿಕೆಗಳನ್ನು ಮಾಡುತ್ತಿದ್ದಾರೆ. ದುಷ್ಟ ಮನಸ್ಸಿನ ಇಂತಹ ಮಾತುಗಳು ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕತೆಯನ್ನು ತೋರಿಸುತ್ತದೆ. ದೇಶದ ಜನತೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಈ ನೀಚ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಪ್ರಹ್ಲಾದ್ ಜೋಶಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ : ‘ದೊಡ್ಮನ್ಸ’ ತೆರೆಗೆ ಬರಲು ರೆಡಿ – ಇದು ಬೆಂಗಳೂರಿನ ಆಟೋ ಡ್ರೈವರ್ನ ಬದುಕಿನ ಜೀವನ ‘ಚಿತ್ರ’ಣ!









