ಬೆಂಗಳೂರು : IPL 2026 ರ11 ನೇ ಪಂದ್ಯ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ ಆಗಲಿದೆ. ಈ ರೋಚಕ ಪಂದ್ಯವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಸಂಚಾರದ ಸಮಸ್ಯೆ ಎದುರಾಗದಂತೆ ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿವೆ.
ಪಂದ್ಯ ಮುಗಿದ ನಂತರ ಅಭಿಮಾನಿಗಳು ತಮ್ಮ ಮನೆಗಳಿಗೆ ಸುರಕ್ಷಿತವಾಗಿ ಮರಳಲು ಬಿಎಂಟಿಸಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರದ ವಿವಿಧ ಭಾಗಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ.
ಯಾವೆಲ್ಲಾ ಭಾಗಗಳಿಗೆ ಬಸ್ ಸೌಲಭ್ಯವಿದೆ?
- ಚಿನ್ನಸ್ವಾಮಿ ಸ್ಟೇಡಿಯಂ ಟು ಕಾಡುಗೋಡಿ ಬಸ್ ನಿಲ್ದಾಣ (HAL ರಸ್ತೆ ಮೂಲಕ)
- ಚಿನ್ನಸ್ವಾಮಿ ಸ್ಟೇಡಿಯಂ ಟು ಸರ್ಜಾಪುರ
- ಚಿನ್ನಸ್ವಾಮಿ ಸ್ಟೇಡಿಯಂ ಟು ಎಲೆಕ್ಟ್ರಾನಿಕ್ ಸಿಟಿ
- ಚಿನ್ನಸ್ವಾಮಿ ಸ್ಟೇಡಿಯಂ ಟು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
- ಚಿನ್ನಸ್ವಾಮಿ ಸ್ಟೇಡಿಯಂ ಟು ಜನಪ್ರಿಯ ಟೌನ್ಶಿಪ್ (ಮಾಗಡಿ ರಸ್ತೆ)
- ಚಿನ್ನಸ್ವಾಮಿ ಸ್ಟೇಡಿಯಂ ಟು ಆರ್.ಕೆ.ಹೆಗಡೆ ನಗರ, ಯಲಹಂಕ
- ಚಿನ್ನಸ್ವಾಮಿ ಸ್ಟೇಡಿಯಂ ಟು ಹೊಸಕೋಟೆ
- ಚಿನ್ನಸ್ವಾಮಿ ಸ್ಟೇಡಿಯಂ ಟು ಬನಶಂಕರಿ
ಕ್ರಿಕೆಟ್ ಪ್ರೇಮಿಗಳ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಮೆಟ್ರೋ ಸಂಚಾರದ ಅವಧಿಯನ್ನು ಮಧ್ಯರಾತ್ರಿ 2 ಗಂಟೆಯವರೆಗೆ ವಿಸ್ತರಿಸಿದೆ.
ಕೊನೆಯ ರೈಲು ಹೊರಡುವ ಸಮಯ :
- ವೈಟ್‌ಫೀಲ್ಡ್ (ಕಾಡುಗೋಡಿ): ರಾತ್ರಿ 12.30ಕ್ಕೆ
- ಚೆಲ್ಲಘಟ್ಟ: ರಾತ್ರಿ 12.45ಕ್ಕೆ
- ರೇಷ್ಮೆ ಸಂಸ್ಥೆ ಮತ್ತು ಮಾದಾವರ: ರಾತ್ರಿ 12.45ಕ್ಕೆ
- ಬೊಮ್ಮಸಂದ್ರ: ರಾತ್ರಿ 12.30ಕ್ಕೆ
- ಆರ್.ವಿ. ರಸ್ತೆ: ರಾತ್ರಿ 2.00ಕ್ಕೆ (ವಿಶೇಷ ಸೇವೆ)
- ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ ನಿಲ್ದಾಣ): ನಾಲ್ಕೂ ದಿಕ್ಕುಗಳಿಗೆ ಮಧ್ಯರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ.
- ಡಿಜಿಟಲ್ ಟಿಕೆಟ್ ಸೌಲಭ್ಯ: ಅಭಿಮಾನಿಗಳು ಕ್ಯೂನಲ್ಲಿ ನಿಲ್ಲುವುದನ್ನು ತಪ್ಪಿಸಲು QR ಕೋಡ್ ಡಿಜಿಟಲ್ ಐಪಿಎಲ್ ಪಂದ್ಯದ ಟಿಕೆಟ್‌ಗಳು ಲಭ್ಯವಿವೆ.
ವಾಹನ ಸವಾರರಿಗಾಗಿ ಬಿಎಂಆರ್‌ಸಿಎಲ್ ನಗರದ 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ದ್ವಿಚಕ್ರ ವಾಹನಗಳಿಗೆ ₹30 ಮತ್ತು ಕಾರುಗಳಿಗೆ ₹60 ನಿಗದಿಪಡಿಸಲಾಗಿದೆ. ವೈಟ್ಫೀಲ್ಡ್, ನಾಗಸಂದ್ರ, ಕೆ.ಆರ್. ಪುರ, ಬನಶಂಕರಿ, ಯಲಚೇನಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ ಮತ್ತು ಬೊಮ್ಮಸಂದ್ರ ಸೇರಿದಂತೆ 44 ನಿಲ್ದಾಣಗಳಲ್ಲಿ ಈ ಸೌಲಭ್ಯವಿರಲಿದೆ.
ಇದನ್ನೂ ಓದಿ : ಶ್ರೇಯಾಂಕ-ನಿರಂಜನ್ ಮದುವೆ ವದಂತಿ – ವೈರಲ್ ಸುದ್ದಿಗೆ ಟಾಂಗ್ ಕೊಟ್ಟ ನಟ!









