ರಾಜ್ಯಕ್ಕೆ ಮತ್ತೆ ವರುಣನ ಎಂಟ್ರಿ – ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ​!

ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ಮಧ್ಯೆಯೇ ಭಾರೀ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಇಂದಿನಿಂದ ಹವಾಮಾನದಲ್ಲಿ ಭಾರೀ ವೈಪರಿತ್ಯ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ರಾಜ್ಯದ ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ 14ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಗುಡುಗು ಮಿಂಚಿನೊಂದಿಗೆ ಮಳೆ ಅಬ್ಬರಿಸುವ ಸಾಧ್ಯತೆಯಿದೆ.

ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗಿನ ಆರ್ಭಟ- ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಸಂಜೆ ವೇಳೆಗೆ ಭರ್ಜರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಮುಂಜಾನೆಯೇ ಮಳೆಯ ಸಿಂಚನವಾಗಲಿದೆ. ಇನ್ನು ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಜನತೆ ಸಂಜೆ ವೇಳೆ ಛತ್ರಿ ಹಿಡಿಯುವುದು ಮರೆಯಬೇಡಿ, ಅಲ್ಲಿಯೂ ವರುಣನ ಅಬ್ಬರ ಜೋರಾಗಿರಲಿದೆ.

ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ರಾತ್ರಿ ವೇಳೆ ಮಳೆಯಾಗುವ ಲಕ್ಷಣಗಳಿವೆ. ಇನ್ನು ಬೆಂಗಳೂರು ನಗರ, ಮೈಸೂರು ಮತ್ತು ಮಂಡ್ಯದ ಮಂದಿಗೆ ರಾತ್ರಿ ಸಮಯದಲ್ಲಿ ಸಾಧಾರಣ ಮಳೆಯಾಗುವ ಮೂಲಕ ಬಿಸಿಲ ಬೇಗೆಯಿಂದ ಸ್ವಲ್ಪ ಮುಕ್ತಿ ಸಿಗಲಿದೆ.

ಇನ್ನು ಏಪ್ರಿಲ್ 5ರ ಬಳಿಕ ರಾಜ್ಯದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಲಿದೆ. ನಂತರ ಏಪ್ರಿಲ್ 10 ರ ನಂತರ ರಾಜ್ಯದಾದ್ಯಂತ ಮತ್ತೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 

ಇದನ್ನೂ ಓದಿ : ನಾನು ಯುದ್ಧಕ್ಕೆ ನಿಂತ್ರೆ ಆಗೋದೇ ಬೇರೆ – ಕಾಂಟ್ರವರ್ಸಿ ಮಾಡೋರ ವಿರುದ್ಧ ಸಪ್ತಮಿ ಗೌಡ ಕಿಡಿ!

Btv Kannada
Author: Btv Kannada

Leave a Comment

Read More