ಸೋಮಣ್ಣ ಕೆಲಸ ಇಲ್ಲದಿರುವ ಮಂತ್ರಿ, ಆತನಿಗೆ ಫೈಲು ಹೋಗುವುದಿಲ್ಲ – ಸಿಎಂ ಸಿದ್ದರಾಮಯ್ಯ ಲೇವಡಿ!

ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ. ಅವರಿಗೆ ಪ್ರಚಾರ ಮಾಡಲು ಸಮಯವಿಲ್ಲ ಎಂದಲ್ಲ, ಕ್ಷೇತ್ರದಲ್ಲಿ ಸೋಲುತ್ತೇವೆ ಎಂದು ತಿಳಿದಿರುವುದರಿಂದ ಹೆಚ್ಚು ಪ್ರಚಾರ ಮಾಡುತ್ತಿಲ್ಲ‌ ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಮಾತನಾಡಲು ಸೋಮಣ್ಣ ನಮ್ಮ ಪಕ್ಷದ ಹೈಕಮಾಂಡ್ ಅಲ್ಲ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಸತ್ಯವಿಲ್ಲ ಹಾಗೂ ಹೇಳಿದಂತೆ ನಡೆದುಕೊಳ್ಳುತ್ತಿಲ್ಲವಾದ್ದರಿಂದ ಅವರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಲು ನನಗೆ ಇಷ್ಟವಿಲ್ಲ ಎಂದರು.

ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತಿದೆ ಎಂಬ ಭಯದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಕ್ಷದಿಂದ ಉಚ್ಛಾಟಿಸಲ್ಪಟ್ಟಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಗೋಗರೆದು ಕರೆ ತಂದು ಪ್ರಚಾರ ಕಾರ್ಯಕ್ಕೆ ಇಳಿಸಿದ್ದಾರೆ. ಇದು ಅವರ ದ್ವಂದ್ವ ನೀತಿ, ಕರ್ನಾಟಕದಲ್ಲಿ ಬಿಜೆಪಿ ಎಂಥಾ ಹೀನಾಯ ಸ್ಥಿತಿಯಲ್ಲಿದೆ ಎಂಬುದಕ್ಕಿದು ಸಾಕ್ಷಿ ಎಂದು ಸೋಮಣ್ಣಗೆ ಸಿಎಂ ಟಾಂಗ್ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಪೂರೈಕೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದು ಅವರ ಕರ್ತವ್ಯ. ರಾಜ್ಯ ಸರ್ಕಾರ ವಿತರಣೆ ಮಾಡುತ್ತದೆಯಷ್ಟೇ. ಆಟೋ ಚಾಲಕರು ಆಹಾರ ಸಚಿವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳುತ್ತಿದ್ದಾರೆ, ಆದರೆ ಇವರು ನಿಜವಾಗಿ ನರೇಂದ್ರ ಮೋದಿಯವರ ಮನೆಗೆ ಮುತ್ತಿಗೆ ಹಾಕಬೇಕು ಎಂದರು.

ರಾಜ್ಯದ ಬಜೆಟ್​ನಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂಬ ಯತ್ನಾಳ್ ಅವರ ಮಾತು ದ್ವೇಷ ರಾಜಕೀಯದಿಂದ ಕೂಡಿದ್ದು. ಅಲ್ಪಸಂಖ್ಯಾತರು ಈ ರಾಜ್ಯದ ನಾಗರಿಕರಲ್ಲವೇ? ಅವರ ಜನಸಂಖ್ಯೆ 14% ರಷ್ಟಿದ್ದು ಎಲ್ಲರಿಗೂ ಅನುದಾನ ನೀಡಿದಂತೆ ಅವರಿಗೂ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ : ಕೈಗಾರಿಕಾ ಡೀಸೆಲ್ ದರ ಭಾರಿ ಏರಿಕೆ – ಲೀಟರ್‌ಗೆ ಒಂದೇ ಬಾರಿ 28 ರೂ. ಹೆಚ್ಚಳ!

Btv Kannada
Author: Btv Kannada

Leave a Comment

Read More