ಬೆಂಗಳೂರು : ರಾಜ್ಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಫೆಬ್ರವರಿ 16ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಇಂದಿನಿಂದ 10 ದಿನ ಸಿದ್ದರಾಮಯ್ಯ ಸರ್ಕಾರದ ಬಜೆಟ್ ಅಧಿವೇಶನ ನಡೆಯಲಿದೆ.
ಬಜೆಟ್ ಅಧಿವೇಶನ ಆಗಿರುವುದರಿಂದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಜನರ ನಿರೀಕ್ಷೆಯೂ ಹೆಚ್ಚಿದೆ. ಇತ್ತೀಚಿಗಷ್ಟೆ ಕೇಂದ್ರದ ಬಜೆಟ್ ಮಂಡನೆಯಾಗಿದ್ದು, ತೆರಿಗೆ ವಿಚಾರಕ್ಕೆ ವಾಗ್ಯುದ್ಧ ಮುಂದುವರಿದಿರುವ ಬೆನ್ನಲ್ಲೇ ರಾಜ್ಯದಲ್ಲಿ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಇದರೊಂದಿಗೆ ಮತ್ತೊಂದು ಸುತ್ತಿನ ಸಮರಕ್ಕೆ ವೇದಿಕೆ ಸಜ್ಜಾಗಿದೆ.
ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಧಿವೇಶನದಲ್ಲಿ ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ, ಬರ ಪರಿಹಾರ ಬಿಡುಗಡೆ ವಿಳಂಬ, ಕಾಮಗಾರಿಯಲ್ಲಿ ಶೇಕಡಾ 40ರಷ್ಟು ಕಮಿಷನ್ ಆರೋಪ, ರಾಜ್ಯದ ಹಣಕಾಸು ಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸದನದಲ್ಲಿ ವಾಕ್ಸಮರ ನಡೆಯುವ ಸಾಧ್ಯತೆ ಇದೆ.
ಬಜೆಟ್ ಅಧಿವೇಶನ ಶುರುವಾಗುತ್ತಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ನಿನ್ನೆ ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದರು. ವಾಣಿಜ್ಯ ಸಂಘ-ಸಂಸ್ಥೆಗಳ ಅಹವಾಲು ಪಡೆದಿದ್ದರು. ಸಾರಿಗೆ ಒಕ್ಕೂಟ, ರೈತ ಸಂಘಟನೆಗಳು, ವಾಣಿಜ್ಯ ಸಂಘಟನೆಗಳು, ಐಟಿ, ಕೈಗಾರಿಗಾ ಸಂಘಟನೆಗಳ ಜೊತೆ ಸಿಎಂ ಪೂರ್ವಭಾವಿ ಸಭೆ ನಡೆಸಿ ಬಜೆಟ್ ಕುರಿತಂತೆ ಬೇಡಿಕೆ, ಸಲಹೆ ಪಡೆದರು.
ಈ ವೇಳೆ ರೈತ ಮುಖಂಡರು ಗ್ಯಾರಂಟಿ ಯೋಜನೆಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಪೂರ್ಣ ಕೃಷಿ ಸಾಲಮನ್ನ ಮಾಡುವಂತೆ ಸಿಎಂಗೆ ಒತ್ತಾಯಿಸಿದರು. ಇನ್ನು ಸಾರಿಗೆ ಸಂಘಟನೆ ಕೂಡ ಹಲವು ಬೇಡಿಕೆಗಳನ್ನ ಇಟ್ಟಿದೆ.