ಬೆಂಗಳೂರು : ಇನ್ಮುಂದೆ 6 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಬೆಂಗಳೂರು ಸಂಚಾರಿ ಪೊಲೀಸರು ಖಡಕ್ ಆದೇಶ ಹೊರಡಿಸಿದ್ದಾರೆ.
ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ಪೋಷಕರು ಮಕ್ಕಳಿಗೆ ಅಲ್ಲದೇ ತಾವು ಕೂಡ ಹೆಲ್ಮೆಟ್ ಧರಿಸದೇ ಬರುತ್ತಿದ್ದಾರೆ. ಜೊತೆಗೆ ಶಾಲಾ ಅಟೋ, ಖಾಸಗಿ ಕಾರು, ಟಿಟಿ ವಾಹನಗಳಲ್ಲಿ ನಿಗದಿತ ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆ ಪೊಲೀಸರು ಈ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದ್ದಾರೆ.
ಮಕ್ಕಳನ್ನು ಶಾಲೆಗೆ ಬಿಡಲು ಬರುವ ಪೋಷಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. 6 ವರ್ಷ ಮೇಲ್ಪಟ್ಟ ಮಕ್ಕಳು ಸಹ ಇನ್ಮುಂದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಷ್ಟಬಂದಂತೆ ಖಾಸಗಿ ವಾಹನಗಳಲ್ಲಿ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ ಎಂದು ಬೆಂಗಳೂರು ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ.
ಶಾಲಾ ಅಟೋ, ಖಾಸಗಿ ಕಾರು, ಟಿಟಿ ವಾಹನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವವರು ಮತ್ತು ಮೂರಕ್ಕೂ ಹೆಚ್ಚು ಮಕ್ಕಳನ್ನು ಗಾಡಿಯಲ್ಲಿ ಕರೆದುಕೊಂಡು ಹೋಗುವ ಪೋಷಕರ ವಿರುದ್ಧವೂ ಕ್ರಮಕೈಗೊಳಲಾಗುತ್ತದೆ ಎಂದು ಹೇಳಿದೆ. ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಎಚ್ಚರಿಸಿದ್ದು, ಶಾಲೆಗಳ ಬಳಿ ಸ್ಪೆಷಲ್ ಡ್ರೈವ್ ಮಾಡಲು ಟ್ರಾಫಿಕ್ ಪೊಲೀಸರು ಸಿದ್ದತೆ ನಡೆಸುತ್ತಿದ್ದಾರೆ.