ಬೆಂಗಳೂರು : ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಿ ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೇರೆಯವರು ಏಕೆ ಗುಂಡಿಕ್ಕಿ ಕೊಲ್ಲಬೇಕು, ನೀವು ಸಮಯ ಕೊಟ್ಟರೆ ನಿಮ್ಮ ಎದುರು ಬಂದು ನಿಲ್ಲುತ್ತೇನೆ, ನೀವೇ ಗುಂಡಿಕ್ಕಿ ಕೊಂದುಬಿಡಿ ಈಶ್ವರಪ್ಪನವರೇ ಎಂದು ಡಿ.ಕೆ ಸುರೇಶ್ ಸವಾಲೆಸೆದಿದ್ದಾರೆ.
ಕನ್ನಡಿಗರಿಗಾಗಿ, ಕರ್ನಾಟಕ್ಕೋಸ್ಕರ ಇನ್ನೊಂದು ವಾರದೊಳಗೆ ಸಮಯ ಕೊಡುತ್ತೇನೆ, ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ, ದಯವಿಟ್ಟು ನಿಮ್ಮ ಆಸೆ ಈಡೇರಿಸಿಕೊಂಡು ನಿಮ್ಮ ನಾಯಕರಿಂದ ಶಹಬ್ಬಾಸ್ ಗಿರಿ ತೆಗೆದುಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
ಮಹಾತ್ಮಾ ಗಾಂಧಿಯವರನ್ನು ಕೊಂದ ಕೀರ್ತಿ ಬಿಜೆಪಿ ಪಕ್ಷಕ್ಕಿದೆ. ಕನ್ನಡಪರ, ಕರ್ನಾಟಕ ಪರ ಧ್ವನಿಯೆತ್ತಿದ್ದಕ್ಕೆ ನನ್ನನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳುತ್ತಿದ್ದಾರೆ. ಬಡವರನ್ನು ಬಾವಿಗೆ ತಳ್ಳಿ ಯಾಕೆ ಆಟ ನೋಡುತ್ತೀರಿ, ನಿಮಗೆ ರಾಜ್ಯಪಾಲ ಹುದ್ದೆಯ ಆಸೆ ಇರಬೇಕೆಂದು ಕಾಣಿಸುತ್ತದೆ. ಬಿಜೆಪಿಯವರು ನಿಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆ ಅಂತ ಕಾಣಿಸುತ್ತದೆ. ಇದರಿಂದಾಗಿ ನೊಂದು ಹಿರಿಯರಾಗಿದ್ದರೂ ಕೂಡ ಏನೋ ಮಾತನಾಡಬೇಕೆಂದು ಆಗಾಗ ಈ ರೀತಿ ಮಾತನಾಡುತ್ತಿದ್ದೀರಿ ಎಂದು ಕಾಣಿಸುತ್ತಿದೆ ಎಂದು ಈಶ್ವರಪ್ಪಗೆ ಟಾಂಗ್ ಕೊಟ್ಟರು.
ನಮ್ಮ ತಂಟೆಗೆ ಬಂದವರಿಗೆ ಸೆಟಲ್ಮೆಂಟ್ ಆಗ್ತಿದೆ – ಡಿಕೆಶಿ, ಇನ್ನು ಈ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ನಮ್ಮ ತಂಟೆಗೆ ಬಂದವರಿಗೆ ಸೆಟಲ್ಮೆಂಟ್ ಆಗ್ತಿದೆ. ಹಿಂದೆ ಅಸೆಂಬ್ಲಿಯಲ್ಲಿ ಹೀಗೆ ಮಾತನಾಡಿದ್ರು ನಿಮಗೆ ನೆನಪಿದ್ಯಾ?
ನಮ್ಮ ತಂದೆಯವರನ್ನ ನೆನಪಿಸಿಕೊಂಡಿದ್ದರು. ಈಗ ಎಲ್ಲಿದ್ದಾರೆ ಈಶ್ವರಪ್ಪ ಅವರು. ಯಾರ್ಯಾರು ನಮ್ಮ ಸುದ್ದಿಗೆ ಬಂದಿದಾರೋ ಅವರಿಗೆಲ್ಲ ಒಂದೊಂದೇ ಸೆಟಲ್ಮೆಂಟ್ ಆಗುತ್ತಿದೆ ಎಂದು ಹೇಳಿದರು. ಪರೋಕ್ಷವಾಗಿ ಅವರಿಗೆ ಟಿಕೆಟ್ ಸಿಗದೇ ಅವರ ಯಾವ ಸ್ಥಿತಿಯಲ್ಲಿದ್ದಾರೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.
ಗುಂಡಿಟ್ಟು ಕೊಲ್ಲುತ್ತೇನೆ ಅಂತಾರೆ ಕೊಲ್ಲಲಿ ಬಿಡಿ. ಡಿಕೆ ಸುರೇಶ್ ಅವರದು ಈ ಗುಂಡಿಗೆ ಹೆದರುವ ಬ್ಲಡ್ ಅಲ್ಲ.ಬೆಂಗಳೂರಿನಲ್ಲಿ ನಮ್ಮದೇ ಆದ ಇತಿಹಾಸವಿದೆ. ರಾಜಕಾರಣ ಮಾಡಬೇಕಾದವರು. ಹಿಂದೆನೂ ಹೇಳಿದ್ದೇನೆ. ನಾವು ಹುಲ್ಲು ಗಾಡಿನ ಹಿಡ್ಕೊಂಡು ಬರಲಿಲ್ಲ. ಕಿವಿ ಮೇಲೆ ಹೂ ಇಟ್ಕೊಂಡು ಬರಲಿಲ್ಲ ಎಂದು ಈಶ್ವರಪ್ಪಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದರು.
ಇದನ್ನೂ ಓದಿ : ಆರೋಪಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ..!