ಬೆಂಗಳೂರು : ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಪ್ರಭು ಶ್ರೀ ರಾಮನ ಭವ್ಯ ಮಂದಿರದ ಉದ್ಘಾಟನೆಗೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈ ಶುಭ ಮುಹೂರ್ತಕ್ಕೆ ಇನ್ನು ಕೇವಲ 3 ದಿನಗಳು ಮಾತ್ರ ಬಾಕಿ ಉಳಿದಿದ್ದು, ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಯಾಗಲಿದೆ.
ಈ ಹಿನ್ನೆಲೆ, ರಾಮಮಂದಿರ ಉದ್ಘಾಟನೆಯ ದಿನವಾದ ಜನವರಿ 22 ಸೋಮವಾರದಂದು ಇಡೀ ಕರ್ನಾಟಕಕ್ಕೆ ಪೂರ್ಣ ದಿನ ಅಥವಾ ಕನಿಷ್ಠ ಅರ್ಧ ದಿನ ರಜೆಯನ್ನು ಕೋರಿ ಬೆಂಗಳೂರು ವಕೀಲರ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿಯವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಘದ ಪರವಾಗಿ ಮನವಿಯನ್ನು ಸಲ್ಲಿಸಿದ್ದಾರೆ.
ಕರ್ನಾಟಕದ ಪ್ರತಿಯೊಬ್ಬ ಜನರೂ ರಾಮಮಂದಿರದ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ರಾಮನ ಪ್ರತಿಷ್ಠಾಪನಾ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಈಗಾಗಲೇ, ಕೇಂದ್ರ ಸರಕಾರವೂ ತನ್ನ ನೌಕರರಿಗೆ ಅರ್ಧ ದಿನ ರಜೆ ಘೋಷಿಸಿ, ರಾಮ ಪ್ರತಿಷ್ಠಾಪನೆಯ ಕ್ಷಣದ ಧನ್ಯತೆ ಅನುಭವಿಸಲು ಅನುವು ಮಾಡಿಕೊಟ್ಟಿದೆ. ಹೀಗಾಗಿ, ರಾಜ್ಯ ಸರ್ಕಾರವೂ ಅರ್ಧ ದಿನ ಅಥವಾ ಪೂರ್ತಿ ದಿನ ಸರ್ಕಾರಿ ರಜೆ ಘೋಷಿಸುವ ಮೂಲಕ ರಾಮಭಕ್ತರ ಆಸೆಯನ್ನು ಈಡೇರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ವಿವೇಕ್ ಸುಬ್ಬಾರೆಡ್ಡಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಅಯೋಧ್ಯೆ ಬಾಲರಾಮನ ಮೂರ್ತಿ ಹೇಗಿದೆ ಗೊತ್ತಾ? – ಮೊದಲ ಚಿತ್ರ ವೈರಲ್..!