ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಾಕಿ ಉಳಿದಿದ್ದ ನಾಲ್ಕು ಕ್ಷೇತ್ರಗಳ ಪೈಕಿ ಚಾಮರಾಜನಗರ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ್ದು, ಕೋಲಾರ ಕ್ಷೇತ್ರದ ಟಿಕೆಟ್ ಕಾಯ್ದಿರಿಸಿದೆ.
ನಿರೀಕ್ಷೆಯಂತೆ ಬಳ್ಳಾರಿ ಲೋಕಸಭಾ ಟಿಕೆಟ್ ಇ ತುಕರಾಂ, ಚಾಮರಾಜನಗರ ಕ್ಷೇತ್ರದ ಟಿಕೆಟ್ ಸಚಿವ ಎಚ್ಸಿ ಮಹಾದೇವಪ್ಪ ಪುತ್ರ ಸುನೀಲ್ ಬೋಸ್, ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ರಕ್ಷಾರಾಮಯ್ಯಗೆ ನೀಡಲಾಗಿದೆ. ಇದರೊಂದಿಗೆ ಕಾಂಗ್ರೆಸ್ ಒಟ್ಟು 28 ಕ್ಷೇತ್ರಗಳಲ್ಲಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದು, ಕೋಲಾರ ಒಂದು ಕ್ಷೇತ್ರವನ್ನು ಬಾಕಿ ಉಳಿಸಿಕೊಂಡಿದೆ.
ಕಗ್ಗಂಟಾದ ಕೋಲಾರ ಟಿಕೆಟ್ : ಕಾಂಗ್ರೆಸ್ ಪಕ್ಷದೊಳಗಿನ ಬಣ ರಾಜಕೀಯ ಸದ್ಯದ ಮಟ್ಟಿಗೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ವಿಚಾರ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕೋಲಾರ ಟಿಕೆಟ್ ಮುನಿಯಪ್ಪ ಬಿಡ್ತಿಲ್ಲ, ರಮೇಶ್‌ಕುಮಾರ್ ಒಪ್ತಿಲ್ಲ.
ಸಚಿವ ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದ ನಡುವೆ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಇದರ ಮಧ್ಯೆಯೇ ಮುನಿಯಪ್ಪನವರ ಅಳಿಯನಿಗೆ ಕೋಲಾರ ಟಿಕೆಟ್ ಅಂತಿಮವಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ರಮೇಶ್ ಕುಮಾರ್ ಬಣದ ಶಾಸಕರು ರಾಜೀನಾಮೆಗೆ ಮುಂದಾಗಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನಕ್ಕೆ ಕಾರಣವಾಗಿತ್ತು.
ಕೊನೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿಕೊಂಡು ಕೋಲಾರ ಕಾಂಗ್ರೆಸ್ ಶಾಸಕ ಸಂಧಾನ ಸಭೆ ನಡೆಸಿದ್ದು, ರಾಜೀನಾಮೆಗೆ ಮುಂದಾದ ನಾಯಕರುಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದು, ಯಾರಿಗೆ ನೀಡಬೇಕು ಎನ್ನುವುದನ್ನು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಮುನಿಯಪ್ಪ ಅಳಿಯನಿಗೆ ನೀಡಿದರೆ ರಮೇಶ್ ಕುಮಾರ್ ಬಣ ಚುನಾವಣೆಯಲ್ಲಿ ಕೆಲಸ ಮಾಡಲ್ಲ. ಇನ್ನು ರಮೇಶ್ ಕುಮಾರ್ ಬಣಕ್ಕೆ ನೀಡದರೆ ಮುನಿಯಪ್ಪ ಬಣ ಮುನಿಸಿಕೊಳ್ಳಲಿದೆ. ಹೀಗಾಗಿ ಇಬ್ಬರ ನಡುವೆ ಮೂರನೇ ಅಭ್ಯರ್ಥಿಗೆ ಟಿಕೆಟ್ ನೀಡದರೆ ಹೇಗೆ ಎನ್ನುವ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಹೀಗಾಗಿ ಕೋಲಾರ ಟಿಕೆಟ್ ಯಾರಿಗೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ : NIA ಯಿಂದ ಬಾಂಬರ್ಗಳ ಕ್ಲಿಯರ್ ಫೋಟೊ ರಿಲೀಸ್..! –