ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಲೋಕಸಭಾ ಚುನಾವಣೆಗೆ ಮುನ್ನ ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸಿಎಎ ದೇಶದ ಕಾಯ್ದೆಯಾಗಿದೆ. ಅದನ್ನು ಖಂಡಿತವಾಗಿಯೂ ಲೋಕಸಭಾ ಚುನಾವಣೆಗೆ ಮುನ್ನವೇ ನೋಟಿಫೈ ಮಾಡಲಾಗುವುದು ಅದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ. ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶದಲ್ಲಿದ್ದ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ನೀಡಿ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಕಾಂಗ್ರೆಸ್ ಆ ಭರವಸೆಯಿಂದ ಹಿಂದಕ್ಕೆ ಸರಿಯುತ್ತಿದೆ ಎಂದು ಶಾ ದೂರಿದ್ದಾರೆ.
ಸಿಎಎ ವಿಚಾರದಲ್ಲಿ ದೇಶದಲ್ಲಿ ನಮ್ಮ ಮುಸ್ಲಿಂ ಸಹೋದರರನ್ನು ಮಿಸ್ ಲೀಡ್ ಮಾಡಲಾಗುತ್ತಿದೆ. ಇದು ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವುದಕ್ಕಾಗಿ ನಾವು ಜಾರಿಗೆ ತರುತ್ತಿಲ್ಲ. ಇದರ ಉದ್ದೇಶ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತದಲ್ಲಿ ಆಶ್ರಯ ಪಡೆದುಕೊಂಡವರಿಗೆ ನೀಡುತ್ತಿರುವ ಪೌರತ್ವ ಅಷ್ಟೇ. ಇದರಲ್ಲಿ ದೇಶದಲ್ಲಿರುವ ನಾಗರಿಕರ ಪೌರತ್ವವನ್ನು ಕಿತ್ತುಕೊಳ್ಳುತ್ತಿಲ್ಲ ಎಂದು ಶಾ ಭರವಸೆ ನೀಡಿದ್ದಾರೆ.
ಏನಿದು (CAA) ಪೌರತ್ವ ಕಾಯ್ದೆ? ಪೌರತ್ವ ತಿದ್ದುಪಡಿ ಮಸೂದೆಯನ್ನು (Citizenship Act) 2019ರಲ್ಲಿ ಸಂಸತ್ ಅಂಗೀಕರಿಸಿದೆ. ಈ ಮಸೂದೆಯು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಇಲ್ಲಿನ ಪೌರತ್ವ ನೀಡುವುದನ್ನು ಪ್ರತಿಪಾದಿಸುತ್ತದೆ. ಮುಸ್ಲಿಮರನ್ನು ಈ ಕಾಯ್ದೆಯಿಂದ ದೂರ ಇಡಲಾಗಿದೆ. 2014 ಡಿಸೆಂಬರ್ 31ರ ಮೊದಲು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡುತ್ತದೆ.
ಇದನ್ನೂ ಓದಿ : ಇನ್ಮುಂದೆ 6 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ..!