ಬೆಂಗಳೂರು : ಬೈಕ್ ಬಿಟ್ಟು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದು ಮಗನನ್ನೇ ತಂದೆ ಸಾಯಿಸಿದ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಂಜನ್ ಕುಮಾರ್ (27) ಮೃತ ಪುತ್ರ. ವೆಂಕಟೇಶ್ (57) ಕೊಲೆ ಮಾಡಿದ ಆರೋಪಿ ತಂದೆ.
ವೆಂಕಟೇಶ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದ. ವೆಂಕಟೇಶ್ಗೆ ಅಂಜನ್ ಹಾಗೂ ಓರ್ವ ಮಗಳಿದ್ದು, ಮಗಳಿಗೆ ದ್ವಿಚಕ್ರ ವಾಹನ ಕೊಡಿಸಿದ್ದ. ಭಾನುವಾರ ಸಂಜೆ ಬೈಕ್ ತೆಗೆದುಕೊಂಡು ಹೋಗಿದ್ದ ವೆಂಕಟೇಶ್, ಕುಡಿದ ಮತ್ತಲ್ಲಿ ಕೀ ಕಳೆದುಕೊಂಡು , ಬೈಕ್ ತರದೆ ಮನೆಗೆ ವಾಪಸ್ ಬಂದಿದ್ದ.
ನಿನ್ನೆ ಬೆಳಗ್ಗೆ ತಂದೆಗೆ ಬೈಕ್ ಎಲ್ಲಿ ಎಂದು ಮಗ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದೆ. ಜಗಳ ಮಧ್ಯೆ ಹೆಲ್ಮೆಟ್ನಿಂದ ತಂದೆಗೆ ಅಂಜನ್ ಹಲ್ಲೆ ಮಾಡಿದ್ದಾನೆ. ಆಗ ಕೋಪಗೊಂಡು ಅಡುಗೆ ಮನೆಯಲ್ಲಿದ್ದ ಚಾಕು ತಂದು ಮಗನಿಗೆ ಇರಿದಿದ್ದಾನೆ.
ಅಂಜನ್ ಎದೆಯ ಎಡಭಾಗಕ್ಕೆ ಚಾಕು ಹೊಕ್ಕಿದ ಪರಿಣಾಮ ಅಂಜನ್ ತೀವ್ರ ರಕ್ತಸ್ರಾವಗೊಂಡು ಸಾವನ್ನಪ್ಪಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ : ತ್ರಿಬಲ್ ಮರ್ಡರ್ ಕೇಸ್ ಆರೋಪಿಗೆ BIAAPA ಅಧ್ಯಕ್ಷ ಸ್ಥಾನ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ..!