ಬೆಂಗಳೂರು : ಮಾನವೀಯತೆ ಮರೆತ ಬಿಬಿಎಂಪಿ ಮಾರ್ಷಲ್ ಓರ್ವ ಬೀದಿ ಬದಿಯ 70 ವರ್ಷದ ವೃದ್ದ ವ್ಯಾಪಾರಿಗೆ ಕಿರುಕುಳ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಳೆದ ಮೂರು ದಿನದ ಹಿಂದೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಈ ಘಟನೆ ನಡೆದಿತ್ತು. ಬಿಬಿಎಂಪಿ ಮಾರ್ಷಲ್ ಅಮಾನವೀಯವಾಗಿ ವರ್ತಿಸಿ 70 ವರ್ಷದ ಹಿರಿಯ ಜೀವಕ್ಕೆ ದಬ್ಬಾಳಿಕೆ ಮಾಡಿ ಕಿರುಕುಳ ನೀಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಾರ್ಷಲ್ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದರು.
ಇದೀಗ, ಇದರಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ವೃದನಿಗೆ ಕಿರುಕುಳ ನೀಡಿದ್ದ ಮಾರ್ಷಲ್ನನ್ನು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಿದೆ. ಬಳಿಕ ಎಲ್ಲಾ ವಲಯದ ಮಾರ್ಷಲ್ ಗಳಿಗೂ ಬಿಬಿಎಂಪಿ ಎಚ್ಚರಿಕೆಯನ್ನು ನೀಡಿದೆ.
ಪ್ರಕರಣದ ಹಿನ್ನಲೆ : ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಮೂರು ದಿನದ ಹಿಂದೆ 70 ವರ್ಷದ ಹಿರಿಯ ಅಜ್ಜ ಬೀದಿ ಬದಿ ನಿಂತು ಬ್ಯಾಗ್ಗಳನ್ನು ಮಾರಾಟ ಮಾಡುತ್ತಿದ್ದರು. ಇದನ್ನು ಗಮನಿಸಿದ ಮಾರ್ಷಲ್ ಅಜ್ಜನ ಬಳಿ ತೆರಳಿ ಬೀದಿಯಲ್ಲಿ ಮಾರಾಟ ಮಾಡದಂತೆ ತಡೆದಿದ್ದಾರೆ. ಅಜ್ಜ ಎಷ್ಟೇ ಪರಿ ಪರಿಯಾಗಿ ಕೇಳಿಕೊಂಡ್ರು ಬಿಡದೇ ಮಾರ್ಷಲ್ ದೌರ್ಜನ್ಯ ಎಸಗಿದ್ದಾರೆ. ವ್ಯಾಪಾರಿಯ ಬ್ಯಾಗ್ ಕಸಿದಿದ್ದಾರೆ. ಅಂಗಲಾಚಿ ಬೇಡಿಕೊಂಡರೂ ಮಾನವೀಯತೆ ಮರೆತು, ಹಿರಿಯ ಎಂಬ ಕೊಂಚವೂ ಗೌರವ ನೀಡದೆ ಗದರಿ ಎಳೆದಾಡಿದ್ದಾರೆ. ನಿಂತಲ್ಲೇ ನಿಲ್ಲಲ್ಲ,
ಓಡಾಡಿಕೊಂಡು ವ್ಯಾಪಾರ ಮಾಡ್ತೀನಿ ಅವಕಾಶ ಮಾಡಿಕೊಡಿ ಎಂದು ವೃದ್ಧ ಮನವಿ ಮಾಡಿದರೂ ಕ್ಯಾರೆ ಎನ್ನದೆ ಮಾರ್ಷಲ್ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಅಜ್ಜನ ಸಹಾಯಕ್ಕೆ ಬಂದ ಸಾರ್ವಜನಿಕರ ಮಾತನ್ನೂ ಕಿವಿಗೆ ಹಾಕಿಕೊಳ್ಳದಂತೆ ಮಾರ್ಷಲ್ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾರ್ಷಲ್ ನಡೆ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಇದೀಗ ಮಾರ್ಷಲ್ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಇದನ್ನೂ ಓದಿ : ರಾಮೇಶ್ವರಂ ಕೆಫ್ ಸ್ಪೋಟ ಪ್ರಕರಣ – ದಾಳಿಯ ಪ್ರಮುಖ ಸಂಚುಕೋರ ಅರೆಸ್ಟ್..!