ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಚಿಕ್ಕಮಗಳೂರು ನಗರದ ವಿಜಯಪುರ ಗಣಪತಿ ಪೆಂಡಾಲ್ ಆವರಣದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣ ವೇಳೆ ಪ್ರತಿಭಟನಾರ್ಥವಾಗಿ ಇಬ್ಬರು ಕಿಡಿಗೇಡಿಗಳು ಬ್ಯಾನರ್ ಕಟ್ಟಲು ಬಂದಿದ್ದರು. ಇದನ್ನು ಗಮನಿಸಿದ್ದ ಬಿಜೆಪಿ, ಹಿಂದೂ ಕಾರ್ಯಕರ್ತರು ಸುತ್ತುವರೆದು ಕಿಡಿಗೇಡಿಗಳನ್ನು ಹಿಡಿಯಲು ಯತ್ನಿಸಿದರು.
ಹಾಗಾಗಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಬಿಜೆಪಿ ಕಾರ್ಯಕರ್ತರು ಇಡೀ ಕಟ್ಟಡ ಸುತ್ತುವರಿದು ಕೂಗಾಟ ಆರಂಭಿಸಿದರು. ಬ್ಯಾನರ್ ಕಟ್ಟಿದ ಇಬ್ಬರು ತಪ್ಪಿಸಿಕೊಳ್ಳಲಾಗದೆ ಕಟ್ಟಡದ ಮೇಲ್ಛಾವಣಿ ಹತ್ತಿದರು ಇದನ್ನು ಖಂಡಿಸಿ ಕೆಲವರು ಕಲ್ಲು ತೂರಟ ನಡೆಸಿದ್ದಾರೆ. ಬ್ಯಾನರ್ ಕಟ್ಟಿದವರನ್ನು ನಮ್ಮ ವಶಕ್ಕೆ ಕೊಡಿ ಎಂದು ಬಿಜೆಪಿ ಸಂಘ ಪರಿವಾರ ಕಾರ್ಯಕರ್ತರು ಒತ್ತಾಯಿಸಿದರು.
ಸ್ಥಳದಲ್ಲಿದ್ದ ಮಾಜಿ ಶಾಸಕ ಸಿ.ಟಿ ರವಿ ಕಿಡಿಗೇಡಿಗಳು ಅಡಗಿ ಕುಳಿತಿದ್ದ ಕಟ್ಟಡ ಪ್ರವೇಶಿಸಲು ಪ್ರಯತ್ನಿಸಿದರು ಆದರೆ ಪೊಲೀಸರು ಅದಕ್ಕೆ ಅವಕಾಶ ಕೊಡಲಿಲ್ಲ. ಹಾಗಾಗಿ ರವಿ ಪೊಲೀಸರಿಗೆ ನೀವು ಅವರ ಬೆಂಬಲಕ್ಕೆ ನಿಂತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊನೆಗೆ ಚಕ್ರವರ್ತಿ ಸೂಲಿಬೆಲೆ ಭಾಷಣ ಆರಂಭಿಸಿದ್ದು, ಪೊಲೀಸರು ಕಟ್ಟಡದ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಕರೆದೊಯ್ದರು.
ಈ ವೇಳೆ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು. ಇದಕ್ಕೂ ಮೊದಲು ಸೂಲಿಬೆಲೆ ಭಾಷಣಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸಲು ಆಗಮಿಸುತ್ತಿದ್ದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್, ರಾಹಿಲ್ ಸೇರಿದಂತೆ ಹತ್ತಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ವಿಷಯ ತಿಳಿದಿದ್ದ ಪೊಲೀಸರು ನೂರಾರು ಪೊಲೀಸರನ್ನು ನಿಯೋಜಿಸಿದ್ದರು. ಸ್ಥಳದಲ್ಲಿ ಎಸ್ಪಿ ವಿಕ್ರಮ್ ಅಮಟೆ ಖುದ್ದು ಮೊಕ್ಕಾಂ ಹೂಡಿದ್ದರು.
ಇದನ್ನೂ ಓದಿ : ಹನುಮಧ್ವಜ ತೆರವು ವಿವಾದ : ಇಂದು ಮಂಡ್ಯ ನಗರ ಬಂದ್..!