ಧಾರವಾಡ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ಭದ್ರಾಪುರ ಗ್ರಾಮದ ಬಳಿ ನಡೆದಿದೆ. ಮದನ್, ಸುರೇಶ್, ಎಲ್.ಎನ್ ವೇಣುಗೋಪಾಲ್ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು.
ಮೃತರು ಮೂಲತಃ ಮೈಸೂರು ಹಾಗೂ ಬೆಂಗಳೂರಿನವರಾಗಿದ್ದು, ಮೂವರು ಗದಗ ಜಿಲ್ಲೆಯ ಮುಂಡರಗಿಯಿಂದ ಬೆಂಗಳೂರು ಕಡೆಗೆ ಹೊರಟಾಗ ಈ ಘಟನೆ ಸಂಭವಿಸಿದೆ. ಗದಗ ಮುಂಡರಗಿಯಲ್ಲಿ ತೋಟ ಖರೀದಿ ಮಾಡಲು ಮೂವರು ಕಾರಿನಲ್ಲಿ ತೆರಳಿದ್ದರು. ತೋಟ ನೋಡಿಕೊಂಡು ಮರಳಿ ಬೆಂಗಳೂರಿಗೆ ಹೋಗುವಾಗ ಈ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿ, ಕಾರಿನಲ್ಲಿ ಕೆಳಗೆ ಸಿಲುಕಿದ್ದ ಮೂವರ ಮೃತದೇಹವನ್ನು ಹೊರ ತೆಗೆದಿದ್ದಾರೆ. ಸದ್ಯ ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರ ಜೂ.27ಕ್ಕೆ ರಿಲೀಸ್!
