ಬಾಗಲಕೋಟೆ : ದಾಸೋಹ ಚಕ್ರವರ್ತಿ ಅನ್ನದಾನೇಶ್ವರ ಎಂದೇ ಖ್ಯಾತರಾಗಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ಪರಮಪೂಜ್ಯ ಶ್ರೀ ದಾನೇಶ್ವರ ಸ್ವಾಮೀಜಿ (75) ಅವರು ನಿನ್ನೆ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಗಳ ನಿಧನದಿಂದಾಗಿ ಬಂಡಿಗಣಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ.

ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು, ಮುಖ್ಯವಾಗಿ ಲಿವರ್ ಸಮಸ್ಯೆಯಿಂದ ತೀವ್ರವಾಗಿ ಅಸ್ವಸ್ಥರಾಗಿದ್ದರು. ನಾಲ್ಕು ದಿನಗಳ ಹಿಂದೆ ಅವರನ್ನು ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಅಪ್ಪಾಜಿಗಳು ಇಹಲೋಕ ತ್ಯಜಿಸಿದರು. ಶ್ರೀಗಳು ಬಾಗಲಕೋಟೆ, ವಿಜಯಪುರ, ಮತ್ತು ಬೆಳಗಾವಿ ಸೇರಿದಂತೆ ಹೊರ ರಾಜ್ಯಗಳಲ್ಲೂ ಅಪಾರ ಭಕ್ತರನ್ನು ಹೊಂದಿದ್ದರು. ತಮ್ಮ ದಾಸೋಹ ಮತ್ತು ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದರು.

ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗಿದೆ, ಪಾರ್ಥಿವ ಶರೀರವು ಬೆಳಗಾವಿಯ ಕೆ.ಎಲ್.ಇ. ಆಸ್ಪತ್ರೆಯಿಂದ ಹೊರಡಲಿದೆ. ಮೊದಲು, ಶ್ರೀಗಳ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಸವದಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಅಲ್ಲಿ ಭಕ್ತರು ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ 10 ಗಂಟೆಗೆ ಪಾರ್ಥಿವ ಶರೀರವು ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಮಾಣಿಕ ಮಠಕ್ಕೆ ಆಗಮಿಸಲಿದೆ. ಇಂದು ರಾತ್ರಿ 10 ಗಂಟೆಯಿಂದ ನಾಳೆ ಸಂಜೆ 4 ಗಂಟೆಯವರೆಗೆ ಮಠದ ಆವರಣದಲ್ಲಿ ಭಕ್ತರಿಗೆ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ನಾಳೆ ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನೆರವೇರಲಿದೆ.

ಕಳೆದ ಅಕ್ಟೋಬರ್ 13 ರಂದು ಬಂಡಿಗಣಿ ಮಠದಲ್ಲಿ ನಡೆದ ವಿಶ್ವಾಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಿ.ಎಂ. ಸಿದ್ದರಾಮಯ್ಯ ಅವರು ಶ್ರೀಗಳ ಸೇವೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಭಾಷಣದ ಮಧ್ಯೆ ಸ್ವಾಮೀಜಿಗಳ ವಯಸ್ಸು ಕೇಳಿದ್ದ ಸಿ.ಎಂ, 75 ವಯಸ್ಸಲ್ವಾ ನಿಮಗೆ, ನೀವು ನೂರು ವರ್ಷಕ್ಕೂ ಹೆಚ್ಚು ಕಾಲ ಬಾಳಲಿ. ಆಯಸ್ಸು, ಆರೋಗ್ಯ, ಐಶ್ವರ್ಯ ಎಲ್ಲವನ್ನೂ ದೇವರು ಕೊಡಲಿ ಎಂದು ಶುಭ ಕೋರುತ್ತೇನೆ ಎಂದಿದ್ದರು. ಅಲ್ಲದೆ, ಶ್ರೀಗಳು ವರ್ಷದಲ್ಲಿ 187 ಬಾರಿ ಕೇವಲ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಅನ್ನದಾನ ಮಾಡಿದ್ದಾರೆ ಎಂದು ಹಾಡಿ ಹೊಗಳಿದ್ದರು.

ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ಬಂಡಿಗಣಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಭಕ್ತರ ದಂಡು ಮಠದ ಕಡೆಗೆ ದೌಡಾಯಿಸುತ್ತಿದ್ದು, ರಬಕವಿ-ಬನಹಟ್ಟಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಶ್ರೀಗಳ ಕಿರಿಯ ಸುಪುತ್ರರಾದ ಶಿವಾನಂದ ಸ್ವಾಮೀಜಿ ಅವರು ಭಕ್ತರನ್ನುದ್ದೇಶಿಸಿ ಮಾತನಾಡಿ, ಶ್ರೀಗಳು ಲಿಂಗೈಕ್ಯರಾದರೂ ಅವರ ಆದರ್ಶಗಳು ನಮ್ಮ ಜೊತೆಗಿವೆ. ಅವರ ಆರಾಧನೆ ಮಾಡುತ್ತಾ ಸೇವೆ ಮಾಡೋಣ. ಎಲ್ಲರೂ ಶಾಂತಿಯಿಂದ ಅಪ್ಪಾಜಿ ಅವರ ಅಂತಿಮ ದರ್ಶನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಒಡಹುಟ್ಟಿದವರ ಬಂಧ ಬೆಸೆಯಲು ಹೋಗುವ ‘ಆದಿ-ಲಕ್ಷ್ಮಿ’ಯ ಪುರಾಣ ಇದೇ ಡಿಸೆಂಬರ್ 8 ರಿಂದ ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ!







