ಚಾಮರಾಜನಗರ : ಮಲೈ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕಿರು ಜಲ ವಿದ್ಯುತ್ ಯೋಜನೆಗೆ ‘ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್’ ಖಾಸಗಿ ಕಂಪನಿಗೆ ವನ್ಯಧಾಮದ ಪರಿಸರ ಸೂಕ್ಷ್ಮ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಅನುಮತಿ ನೀಡಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಅವರಿಗೆ ಪತ್ರ ಬರೆದಿರುವ ದಿನೇಶ್ ಕಲ್ಲಹಳ್ಳಿ, ಈ ಯೋಜನೆಗೆ ಕಾನೂನು ಬಾಹಿರವಾಗಿ ಶಿಫಾರಸು ನೀಡಿದ ಮಲೈ ಮಹದೇಶ್ವರ ವನ್ಯಜೀವಿ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು, ಸತೇಗಾಲ ಗ್ರಾಮದ ಸರ್ವೆ ನಂ. 1ರಲ್ಲಿರುವ ಪ್ರದೇಶದಲ್ಲಿ ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯಿಂದ 24.75 ಮೆಗಾವ್ಯಾಟ್ ಸಾಮರ್ಥ್ಯದ ಕಿರು ‘ಜಲವಿದ್ಯುತ್ ಯೋಜನೆ’ ಪ್ರಸ್ತಾಪಿಸಲಾಗಿದೆ. ಈ ಸ್ಥಳವು ಮಲೈ ಮಹದೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಟ್ಟಿದ್ದು, ಪರಿಸರ ಸೂಕ್ಷ್ಮ ವಲಯದೊಳಗೆ ಬರುತ್ತದೆ.
ಹಾಗೆಯೇ ಈ ಪ್ರದೇಶವು ವಿವಿಧ ವನ್ಯಜೀವಿಗಳ ಪ್ರಮುಖ ಆವಾಸಸ್ಥಾನವಾಗಿದೆ. ‘ಕಿರು ಜಲವಿದ್ಯುತ್ ಯೋಜನೆ’ಗೆ ಸಂಬಂಧಿಸಿದಂತೆ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರ ಶಿಫಾರಸು ಕ್ರಮಗಳ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಿಯಮ ಉಲ್ಲಂಘನೆ ಹಾಗೂ ಪ್ರಕ್ರಿಯಾತ್ಮಕ ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸಬೇಕು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತೇಗಾಲ ಗ್ರಾಮದ ಸರ್ವೆ ಸಂಖ್ಯೆ 1ರಲ್ಲಿ ಬರುವ ಅರಣ್ಯ ಪ್ರದೇಶದಲ್ಲಿ, ಖಾಸಗಿ ಕಂಪನಿ ಮೆಸರ್ಸ್ ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್ ಅವರಿಗೆ 24.75 ಮೆಗಾವ್ಯಾಟ್ ಸಾಮರ್ಥ್ಯದ ‘ಬಸವೇಶ್ವರ ಕಿರು ಜಲವಿದ್ಯುತ್ ಯೋಜನೆ ಕೈಗೊಳ್ಳಲು ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ, ಎಲ್ಲಾ ಕಾನೂನು, ನಿಯಮಗಳನ್ನು, ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿ ಅನುಮತಿಯನ್ನು ಶಿಫಾರಸು ಮಾಡಿ, ಮಂಜೂರು ಮಾಡಿದ್ದಾರೆ.

ಮಲೈ ಮಹದೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ‘ಬಾಲಾಜಿ ಕಾವೇರಿ ಪವರ್ ಪ್ರೈವೇಟ್ ಲಿಮಿಟೆಡ್’ನಿಂದ ಪ್ರಸ್ತಾಪಿತ 24.75 ಮೆಗಾವ್ಯಾಟ್ ಬಸವೇಶ್ವರ ಕಿರು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಹಿಂದಿನ ಅಧಿಕಾರಿಗಳ ವರದಿಗಳನ್ನು ಮರೆಮಾಚಲಾಗಿದೆ. ಈ ಸ್ಥಳಕ್ಕೆ ಸಂಬಂಧಿಸಿದಂತೆ 2024ರಲ್ಲಿ ಉಪ ಅರಣ್ಯಾಧಿಕಾರಿ ಬಿ. ಸಂತೋಷ್ ಕುಮಾರ್ ಅವರು ಸಲ್ಲಿಸಿದ “Revised Site Inspection Report”ನಲ್ಲಿ, ಈ ಯೋಜನೆ ವನ್ಯಜೀವಿಗಳ ಮಾರ್ಗದಲ್ಲಿ ಬರುತ್ತದೆ ಎಂದು ಶಿಫಾರಸು ನಿರಾಕರಿಸಿದ್ದರು. ಹಾಲಿ DFO ಚಕ್ರಪಾಣಿ ಅವರು ನಿಯಮಗಳನ್ನು ಉಲ್ಲಂಘಿಸಿ ಹೊಸ ಶಿಫಾರಸು ಮಾಡಿ ಬಾರಿ ಅವ್ಯವಹಾರ ಎಸಗಿದ್ದಾರೆ.

ಮಲೈ ಮಹದೇಶ್ವರ ವನ್ಯಜೀವಿ ಪ್ರದೇಶದಲ್ಲಿ ಶಿಫಾರಸು ಮಾಡಲಾದ ‘ಕಿರು ಜಲವಿದ್ಯುತ್ ಯೋಜನೆ’ಗೆ ಸಂಬಂಧಿಸಿದಂತೆ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರು ತೆಗೆದುಕೊಂಡ ಶಿಫಾರಸು ಕ್ರಮಗಳು, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಅವ್ಯವಹಾರ ಮತ್ತು ವಿವಿಧ ಕಾನೂನುಗಳ ಉಲ್ಲಂಘನೆಯಾಗಿದ್ದು, ಅವರ ವಿರುದ್ಧ ಸಮಗ್ರ ತನಿಖೆ ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೂ ಈ ಯೋಜನೆಗೆ ಶಿಫಾರಸು ನೀಡಿರುವ ಪ್ರಕ್ರಿಯೆ ಮತ್ತು ದಾಖಲೆಗಳನ್ನು ಪೂರ್ಣವಾಗಿ ಪರಿಶೀಲನೆಗೆ ಒಳಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.





ಇದನ್ನೂ ಓದಿ : ಮಂಗಳೂರಲ್ಲಿ ಭಾರೀ ಮಳೆಗೆ ಮನೆಗಳ ಮೇಲೆ ಗುಡ್ಡ ಕುಸಿತ – ಓರ್ವ ಬಾಲಕಿ ಸಾವು.. ಮುಂದುವರೆದ ರಕ್ಷಣಾ ಕಾರ್ಯಾಚರಣೆ!







