ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಕರ ದಬ್ಬಾಳಿಕೆ, ಹೊರ ರಾಜ್ಯಗಳ ಉದ್ಯಮಿಗಳ ಪುಂಡಾಟದ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತಲೇ ಇರುತ್ತದೆ. ಇದರ ನಡುವೆ ಮತ್ತೊಮ್ಮೆ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಹೌದು.. ಕೋರಮಂಗಲದ ಹೋಟೆಲ್ ‘GS SUITES’ನ ಡಿಸ್‌ಪ್ಲೇ ಬೋರ್ಡ್ನಲ್ಲಿ ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅವಮಾನ ಮಾಡಲಾಗಿದೆ. ಈ ಬಗ್ಗೆ ಇದೀಗ ಭಾರೀ ವಿರೋಧ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ಕೊಬ್ಬಿನಿಂದ ಮೆರೆಯುತ್ತಿರುವ ಹಿಂದಿವಾಲಾಗಳ ವಿರುದ್ದ ಕನ್ನಡಿಗರು ಸಿಡಿದೆದ್ದಿದ್ದಾರೆ.
ಕೋರಮಂಗಲದ ‘HOTEL GS SUITES’ನಲ್ಲಿ ನಡೆದ ಈ ಘಟನೆ ಕನ್ನಡಿಗರ ಅಸ್ಮಿತೆಗೆ ಅವಮಾನವಾಗಿದೆ. ಬೋರ್ಡ್ ಮೇಲೆ “ಕನ್ನಡಿಗ ಮಾದರ್ ಚೋದ್” ಎಂದು ಬರೆಯಲಾಗಿದ್ದು, ಇದು ಅತಿರೇಕದ ವರ್ತನೆಯಂತೆ ಕಂಡಿದೆ. ಡಿಸ್‌ಪ್ಲೇ ಬೋರ್ಡ್ನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಪದಗಳಿಂದ ಅವಹೇಳನ ಮಾಡಲಾಗಿದೆ. ನಿನ್ನೆ ರಾತ್ರಿ ಈ ಬರಹ ಕಂಡುಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.
ಈ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್ನಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೋರ್ಡ್ನಲ್ಲಿ ಬೇಕಂತಲೇ ಈ ರೀತಿ ಬರೆದು ಹಾಕಿದ್ದಾರೆ ಎನ್ನಲಾಗ್ತಿದ್ದು, ಪೊಲೀಸರು ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಮಡಿವಾಳ ಇನ್ಸ್‌ಪೆಕ್ಟರ್ ಮೊಹಮ್ಮದ್ ಹೋಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಬ್ಬಂದಿಗಳಿಂದ ಮಾಹಿತಿ ಪಡೆದಿದ್ದಾರೆ. ಅವಹೇಳನಕಾರಿ ಬರಹದ ಬಳಿಕ ತಕ್ಷಣವೇ ಬೋರ್ಡ್ ತೆರವು ಮಾಡಲಾಗಿದೆ. ಹೋಟೆಲ್ ಮ್ಯಾನೇಜರ್ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಸ್‌ಪ್ಲೇ ಬೋರ್ಡ್ ಅನ್ನು ಸಹ ಖಾಕಿ ವಶಕ್ಕೆ ಪಡೆದಿದ್ದು, ಹೊಟೇಲ್ ಕೇರಳ ಮೂಲದ ನೌಷದ್ ಎಂಬುವವರಿಗೆ ಸೇರಿದೆ.
ಈ ಬಗ್ಗೆ ಕನ್ನಡಿಗರ ಆಕ್ರೋಶ ಭುಗಿಲೇಳುತ್ತಿದ್ದಂತೆ, ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಅವರು ಘಟನೆ ಕುರಿತು ಮಾತನಾಡಿದ್ದಾರೆ. ಪ್ರಕರಣ ಸಂಬಂಧ ಮಡಿವಾಳ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಿಸಿದ್ದೇವೆ. ಹೋಟೆಲ್ ಮಾಲೀಕ ವಿದೇಶದಲ್ಲಿ ಇದ್ದಾನೆ ಅವರಿಗೂ ನೋಟಿಸ್ ಕೊಟ್ಟಿದ್ದೀವಿ. ಕಳೆದ 8ನೇ ತಾರೀಖಿನಂದು ಬೋರ್ಡ್ ಅಳವಡಿಸಿದ್ದಾರೆ. ಈ ರೀತಿ ಪದ ಯಾವಾಗಿಂದ ಡಿಸ್‌ಪ್ಲೇ ಮಾಡ್ತಿದ್ದಾರೆ ಅನ್ನೋದನ್ನು ತನಿಖೆ ಮಾಡ್ತಿದ್ದೀವಿ ಎಂದು ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಚೊಚ್ಚಲ ಪೋಸ್ಟರ್ನಲ್ಲೇ ಕುತೂಹಲ ಮೂಡಿಸಿದ ‘ಒಂದು ಅಂಕದ ಪ್ರಶ್ನೆ’!
