ವೇಶ್ಯಾವಾಟಿಕೆ ಕೇಸ್​ ದಾಖಲಿಸದೇ ಇರಲು 1.20 ಲಕ್ಷ ಲಂಚ – ಕಾಡುಗೋಡಿ ಪೊಲೀಸ್ ಠಾಣೆ ಪಿಎಸ್‌ಐ ಬಂಧನ!

ಬೆಂಗಳೂರು : ವೇಶ್ಯಾವಾಟಿಕೆ ಪ್ರಕರಣ ದಾಖಲಿಸದೇ ಇರಲು ₹1.20 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಕಾಡುಗೋಡಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಚಿತ್ರಗಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲಂಚ ಪಡೆಯುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಯಲ್ಲಪ್ಪ ಠಾಣೆಯಿಂದ ಪರಾರಿಯಾಗಿದ್ದಾರೆ.

ಕಾಡುಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈಚೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ವೇಶ್ಯಾವಾಟಿಕೆ ಆರೋಪದಲ್ಲಿ ಹಲವರನ್ನು ಬಂಧಿಸಿದ್ದರು. ಸೀಗೇಹಳ್ಳಿ ನಿವಾಸಿ ಜಯರಾಂ ಎಂಬುವವರ ಬೈಕ್ ಅನ್ನು ವಶಕ್ಕೆ ಪಡೆದಿದ್ದರು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.

ಬೈಕ್ ಅನ್ನು ಬಿಡುಗಡೆ ಮಾಡಲು ಮತ್ತು ಜಯರಾಂ ವಿರುದ್ಧ ಪ್ರಕರಣ ದಾಖಲಿಸದೇ ಇರಲು ಪಿಎಸ್‌ಐ ಪ್ರವೀಣ್ ಅವರು ₹1.20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಜಯರಾಂ ಅವರು ಅದರಲ್ಲಿ ಈಗಾಗಲೇ ₹75,000 ನೀಡಿದ್ದರು. ಪಿಎಸ್‌ಐ ಇನ್ನಷ್ಟು ಹಣಕ್ಕೆ ಒತ್ತಡ ಹೇರಿದ ನಂತರ ಲೋಕಾಯುಕ್ತಕ್ಕೆ ದೂರು ನೀಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ಲೋಕಾಯುಕ್ತ ಪೊಲೀಸರ ಸೂಚನೆಯಂತೆ ಜಯರಾಂ ಅವರು ಶುಕ್ರವಾರ ಕಾಡುಗೋಡಿ ಪೊಲೀಸ್ ಠಾಣೆಗೆ ಹೋಗಿ, ಪ್ರವೀಣ್‌ ಮತ್ತು ಯಲ್ಲಪ್ಪ ಅವರಿಗೆ ₹35,000 ನೀಡಿದ್ದರು. ಇದೇ ವೇಳೆ ದಾಳಿ ನಡೆಸಲಾಯಿತು. ಈ ವೇಳೆ ಯಲ್ಲಪ್ಪ ಅವರು ಸ್ಥಳದಿಂದ ಪರಾರಿಯಾದರು. ಪ್ರವೀಣ್ ಸಿಕ್ಕಿಬಿದ್ದರು ಎಂದು ತಿಳಿಸಿವೆ. ಬಂಧಿತರಿಂದ ಲಂಚದ ಹಣ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿವೆ.

ಇದನ್ನೂ ಓದಿ : ಲಾಕರ್​ನಲ್ಲಿಟ್ಟಿದ್ದ ಬ್ಯಾಂಕ್ ಮ್ಯಾನೇಜರ್ ಚಿನ್ನ ಕದ್ದ ಸಿಬ್ಬಂದಿಗಳು – ಬಸವೇಶ್ವರ ನಗರ ಪೊಲೀಸರಿಂದ ಇಬ್ಬರ ಬಂಧನ!

Btv Kannada
Author: Btv Kannada

Read More