ಮೇ.15ಕ್ಕೆ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಅಸ್ತಿತ್ವಕ್ಕೆ.. 3 ಪಾಲಿಕೆಗೆ ಮೂವರು ಕಮಿಷನರ್ – ಕಾಯ್ದೆಯಲ್ಲಿರುವ ಅಂಶಗಳೇನು?

ಬೆಂಗಳೂರು : ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇ 15ರಿಂದ ಅಸ್ತಿತ್ವ ಕಳೆದುಕೊಳ್ಳಲಿದ್ದು, ‘ಗ್ರೇಟರ್‌ ಬೆಂಗಳೂರು ಪ್ರದೇಶ’ ಎಂದು ಬದಲಾಗಲಿದೆ. ಮೇ.15 ರಂದು ಅಧಿಸೂಚನೆ ಹೊರಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದ್ದರಿಂದ, ಅದು ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಲಿದೆ.

ಬಿಬಿಎಂಪಿ ವ್ಯಾಪ್ತಿಯ ಪ್ರದೇಶವನ್ನು ‘ಗ್ರೇಟರ್‌ ಬೆಂಗಳೂರು ಪ್ರದೇಶ’ ಎಂದು ಪರಿಗಣಿಸಲು ಹಾಗೂ ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆಯನ್ನು ಮೇ 15ರಿಂದ ಜಾರಿಗೊಳಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಅದರಂತೆ ಮೇ 15ರಿಂದ ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ’ ಪ್ರದೇಶವು ಗ್ರೇಟರ್‌ ಬೆಂಗಳೂರು ಪ್ರದೇಶವಾಗಿ ಪರಿವರ್ತನೆಯಾಗಲಿದೆ. ಅದಕ್ಕೆ ಪೂರಕವಾಗಿ ಅಧಿಸೂಚನೆ ಹೊರಡಿಸಲು, ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆಯನ್ನು ಜಾರಿಗೊಳಿಸಲು ಅಂತಿಮವಾಗಿ ಸರ್ಕಾರ ದಿನಾಂಕ ನಿಗದಿಪಡಿಸಿದೆ. ಅದರಂತೆ ಮೇ 15ರಿಂದ ಅಧಿಸೂಚನೆ ಮೂಲಕ ಗ್ರೇಟರ್‌ ಬೆಂಗಳೂರು ಆಡಳಿತ ಕಾಯಿದೆ ಅನುಷ್ಠಾನವಾಗಲಿದೆ.

ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಾಗುತ್ತಲೇ ಬಿಬಿಎಂಪಿಯು 3 ಪಾಲಿಕೆಗಳಾಗಿ ವಿಭಜನೆಗೊಳ್ಳಲಿದೆ. ಈ ಕಾಯಿದೆಗೆ ಶೀಘ್ರವೇ ನಿಯಮಾವಳಿಗಳನ್ನು ರೂಪಿಸಲಾಗುತ್ತದೆ.

3 ಪಾಲಿಕೆಗಳಿಗೆ ನಿಯೋಜನೆಯಾಗಲಿದ್ದಾರೆ 3 ಕಮಿಷನರ್ಸ್ : 3 ಪಾಲಿಕೆಗಳಿಗೂ ಅನುಭವಿ ಹಿರಿಯ IASಗಳ ನಿಯೋಜನೆ ಸಾಧ್ಯತೆಯಿದೆ. GBAಗೆ ಬಿಬಿಎಂಪಿ ಅಧೀನದಲ್ಲಿದ್ದ ಪ್ರದೇಶಗಳ ಜತೆಗೆ ಸಾಕಷ್ಟು ಪ್ರದೇಶಗಳೂ ಸೇರ್ಪಡೆಯಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಲಿದ್ದು, ಬೆಂಗಳೂರು ಅಭಿವೃದ್ಧಿ ಸಚಿವರೇ ಜಿಬಿಎನ ಉಪಾಧ್ಯಕ್ಷರಾಗಲಿದ್ದಾರೆ. ಶಾಸಕರು, ಪಾಲಿಕೆಗಳ ಮೇಯರ್ಸ್ GBA ವ್ಯಾಪ್ತಿಗೆ ಬರಲಿದ್ದಾರೆ. ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ, ಪೊಲೀಸ್ ಕಮಿಷನರ್, ಬಿಎಂಆರ್​ಸಿಎಲ್, ಅಗ್ನಿಶಾಮಕ, ಭೂಸಾರಿಗೆ, ಬಿಎಂಆರ್ ಡಿಎ ಮುಖ್ಯಾಧಿಕಾರಿಗಳು ಸೇರಿ ಅನೇಕ ಇಲಾಖೆ ಅಧಿಕಾರಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿರುತ್ತಾರೆ.

‘ಗ್ರೇಟರ್ ಬೆಂಗಳೂರು ಪ್ರದೇಶ’ ವ್ಯಾಪ್ತಿ ವಿಸ್ತೀರ್ಣ : ತಲಾ 125 ವಾರ್ಡ್‌ಗಳನ್ನು ಒಳಗೊಂಡ ಮೂರು ನಗರ ಪಾಲಿಕೆ ರಚನೆಯಾಗಲಿದ್ದು, ಪ್ರತಿ ಪಾಲಿಕೆಗೂ ‘ಗ್ರೇಟರ್ ಬೆಂಗಳೂರು ಪ್ರದೇಶ’ದ ಗಡಿ ನಿಗದಿಯಾಗಲಿದೆ. ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ ,ಹೆಸರಘಟ್ಟ, ದಾಸನಪುರ, ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿ ವ್ಯಾಪ್ತಿಗೆ ಸೇರ್ಪಡೆಯಾಗಲಿದೆ. ಇನ್ನು ಎಲ್ಲಾ ಪಾಲಿಕೆಗಳ ಹೆಸರು ‘ಬೆಂಗಳೂರು’ ಎನ್ನುವುದರಿಂದಲೇ ಆರಂಭವಾಗಲಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಎಂದು 3 ಭಾಗಗಳಾಗಿ ವಿಂಗಡಣೆ ಮಾಡಲಾಗುತ್ತದೆ.

ಯಾವ್ಯಾವ ವಿಧಾನಸಭಾ ಕ್ಷೇತ್ರಗಳು ಯಾವ್ಯಾವ ಪಾಲಿಕೆ ವ್ಯಾಪ್ತಿಗೆ : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳು ಸೇರಲಿವೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ದಾಸರಹಳ್ಳಿ, ಆರ್ ಆರ್ ನಗರ, ಯಶವಂತಪುರ, ಮಹಾಲಕ್ಷ್ಮಿ ಲೇ ಔಟ್, ಯಲಹಂಕ, ಹೆಬ್ಬಾಳ, ಯಶವಂತಪುರ ಬರಲಿವೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆ.ಆರ್ ಪುರ, ಮಹಾದೇವಪುರ, ಸಿವಿರಾಮನ್ ನಗರ, ಗಾಂಧೀನಗರ, ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ, ಸರ್ವಜ್ಞನಗರ, ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ಬರಲಿವೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಪದ್ಮನಾಭನಗರ, ಶಾಂತಿನಗರ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್, ಆನೇಕಲ್, ಚಾಮರಾಜಪೇಟೆ, ವಿಜಯನಗರ, ಗೋವಿಂದರಾಜನಗರ ಕ್ಷೇತ್ರ ವ್ಯಾಪ್ತಿಗೆ ಬರಲಿವೆ.

ಇದನ್ನೂ ಓದಿ : ಬಹುನಿರೀಕ್ಷಿತ ‘S\O ಮುತ್ತಣ್ಣ’ ಚಿತ್ರದ ಹಾಡಿಗೆ ಧ್ವನಿಯಾದ ಸಂಜಿತ್ ಹೆಗ್ಡೆ!

Btv Kannada
Author: Btv Kannada

Read More