ಬೆಂಗಳೂರು : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ‘ಆಪರೇಷನ್ ಸಿಂಧೂರ್’ ಮೂಲಕ ಪಾಕ್ ಉಗ್ರರಿಗೆ ತಿರುಗೇಟು ನೀಡಿದ್ದು, ಪಾಕಿಸ್ತಾನ ಹಾಗೂ ಪಿಒಕೆ ಒಳಗೆ ಇದ್ದ 9 ಉಗ್ರರ ನೆಲೆಗಳನ್ನು ನಾಶಪಡಿಸಿದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ಕಾರ್ಯಚರಣೆ ನಡೆಸಿದ್ದು, ಸೇನೆಯ ನಡೆಗೆ ಭಾರತೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ರಾಜಕೀಯ ನಾಯಕರು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಭಯೋತ್ಪಾದನೆಗೆ ಇಲ್ಲಿ ಸ್ಥಾನವಿಲ್ಲ – ಸಿಎಂ ಸಿದ್ದರಾಮಯ್ಯ ಟ್ವೀಟ್ : ಆಪರೇಷನ್ ಸಿಂಧೂರ್ ಹಿಂದಿರುವ ನಮ್ಮ ಸೇನೆಯ ಧೈರ್ಯಕ್ಕೆ ಸೆಲ್ಯೂಟ್ ಮಾಡ್ತೇನೆ. ಭಯೋತ್ಪಾದನೆಯನ್ನ ಭಾರತ ಯಾವತ್ತೂ ಸಹಿಸಲ್ಲ. ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ದಾಳಿಯು ಕೇವಲ ಮುಗ್ಧ ಜೀವಗಳ ಮೇಲಲ್ಲ. ಇದು ಭಾರತದ ಕನಸುಗಳು ಮತ್ತು ಚೈತನ್ಯದ ಮೇಲಿನ ದಾಳಿಯಾಗಿದೆ. ಧೈರ್ಯಶಾಲಿ ಸೈನಿಕರ ಪ್ರತಿಯೊಂದು ಪ್ರಯತ್ನವು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಪ್ರತಿಜ್ಞೆ. ಸೇನೆಯ ಕಾರ್ಯಗಳಿಗೆ ನಾವು ಹೆಮ್ಮೆಪಡುತ್ತೇವೆ. ಭಯೋತ್ಪಾದನೆಗೆ ಇಲ್ಲಿ ಸ್ಥಾನವಿಲ್ಲ. ಭಾರತವು ಶಕ್ತಿ ಮತ್ತು ಏಕತೆಯೊಂದಿಗೆ ಪ್ರತಿಕ್ರಿಯಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ರಣಹೇಡಿ ಪಾಕಿಸ್ತಾನಕ್ಕೆ ತಕ್ಕ ಉತ್ತರ – ಡಿಕೆ ಶಿವಕುಮಾರ್ ಟ್ವೀಟ್ : ಆಪರೇಷನ್ ಸಿಂಧೂರ್ ರಣಹೇಡಿ ಪಾಕಿಸ್ತಾನಕ್ಕೆ ತಕ್ಕ ಉತ್ತರ. ಪಹಲ್ಗಾಮ್ ಅಟ್ಯಾಕ್ಗೆ ಸರಿಯಾದ ಉತ್ತರ. ನಾವು ಕೇಂದ್ರ ಸರ್ಕಾರದ ಜೊತೆ ನಿಲ್ತೇವೆ. ನಮ್ಮ ಭದ್ರತಾ ಪಡೆಗಳ ಜೊತೆ ನಿಲ್ತೇವೆ. ಜೈ ಹಿಂದ್ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಟ್ವೀಟ್ : ಭಯೋತ್ಪಾದಕರು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಎಸಗಿದ ಹೇಡಿತನದ ಪೈಶಾಚಿಕ ಕೃತ್ಯಕ್ಕೆ ನಮ್ಮ ಹೆಮ್ಮೆಯ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಭಯೋತ್ಪಾದನೆಯ ಮೂಲೋತ್ಪಾಟನೆಗೆ ಈ ದಿಟ್ಟ ಕ್ರಮ ಮುನ್ನುಡಿಯಾಗಲಿ. ಭಾರತೀಯ ಸೇನೆಯ ಪರಾಕ್ರಮ, ಶೌರ್ಯ, ನಿಖರತೆ ಶ್ಲಾಘನೀಯ. ಭಯೋತ್ಪಾದನೆಯ ವಿರುದ್ಧ, ದೇಶದ ಐಕ್ಯತೆ, ಸಮಗ್ರತೆ, ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರದ ಎಲ್ಲ ಕ್ರಮಗಳನ್ನೂ ನಾವು ಬೆಂಬಲಿಸುತ್ತೇವೆ.
ಜನತಾದಳ ಟ್ವೀಟ್ : ‘ಆಪರೇಷನ್ ಸಿಂಧೂರ’ಕ್ಕೆ ಜಯವಾಗಲಿ. ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡಿರುವ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾಗಲಿ. ಉಗ್ರ ಪೋಷಕ ರಾಷ್ಟ್ರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಕಾಶ್ಮೀರದಲ್ಲಿನ ಭಯೋತ್ಪಾದಕರ ಅಡಗು ತಾಣ ಮತ್ತು ಶಿಬಿರಗಳ ಮೇಲೆ ಭಾರತೀಯ ಸೇನೆ ನಿಖರ ದಾಳಿ ಮಾಡಿ ಧ್ವಂಸ ಗೊಳಿಸಿದೆ. ಪಾಕಿಸ್ತಾನದ ಉಗ್ರರ ಸಂಹಾರಕ್ಕಾಗಿ ಕೈಗೊಂಡಿರುವ “ಆಪರೇಷನ್ ಸಿಂಧೂರ್” ಸೇನಾ ಕಾರ್ಯಾಚರಣೆ”ಯನ್ನು @JanataDal_S ಪಕ್ಷವು ಬೆಂಬಲಿಸುತ್ತದೆ ಮತ್ತು ಸ್ವಾಗತಿಸುತ್ತದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆ ಯಶಸ್ವಿಯಾಗಲಿ. ದೇಶದ ಸಮಸ್ತ ನಾಗರಿಕರ ಬೆಂಬಲವೂ ದೊರಕಿದ್ದು, ಇಡೀ ವಿಶ್ವವೇ ಭಾರತದ ಪರವಾಗಿ ಬೆಂಬಲಕ್ಕೆ ನಿಂತಿದೆ. Wishing Our Forces Safety and Success.
ಕರ್ನಾಟಕ ಬಿಜೆಪಿ ಟ್ವೀಟ್ : ಪಹಲ್ಗಾಮ್ ನಲ್ಲಿ 26 ಮಹಿಳೆಯರ ಸಿಂಧೂರ ಅಳಿಸಿದ ಪಾಪಿ ಪಾಕಿಸ್ತಾನದ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಿದ ಭಾರತೀಯ ಸೇನೆ. ತಡರಾತ್ರಿ ಪಾಕಿಸ್ತಾನದ ಮೇಲೆ ಭರ್ಜರಿ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು #OperationSindhoor ಯಶಸ್ವಿಯಾಗಿದೆ.
ಇದನ್ನೂ ಓದಿ : ಪಾಕ್ಗೆ ಚೀನಾ ನೀಡಿದ್ದ JF-17 ಯುದ್ಧ ವಿಮಾನ ಉಡೀಸ್ – ರಾತ್ರೋರಾತ್ರಿ ಹೊಡೆದುರುಳಿಸಿದ ಭಾರತೀಯ ವಾಯುಪಡೆ!
