ಬೆಂಗಳೂರು : ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದಲೇ ಕಳ್ಳತನದಂತಹ ಘಟನೆಗಳು ನಿರಂತರವಾಗಿ ಬಯಲಾಗುತ್ತಿದ್ದು, ರಾಜ್ಯ ಪೊಲೀಸ್ ಇಲಾಖೆಯ ಗೌರವಕ್ಕೆ ಮತ್ತೊಮ್ಮೆ ಗಂಭೀರ ಧಕ್ಕೆಯಾಗಿದೆ. ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್ಸ್ಟೇಬಲ್ ಓರ್ವ, ವಿಚಾರಣೆಗಾಗಿ ಕರೆತಂದಿದ್ದ ಆರೋಪಿಯ ಕಾರಿನಿಂದ ಬರೋಬ್ಬರಿ ₹11 ಲಕ್ಷ ಹಣ ಕದ್ದು, ಅದರಲ್ಲಿ ಪತ್ನಿಗೆ ಚಿನ್ನಾಭರಣಗಳನ್ನು ಖರೀದಿಸಿರುವುದು ಸಿಸಿಟಿವಿ ದೃಶ್ಯಾವಳಿ ಮತ್ತು ತನಿಖೆಯಿಂದ ಬಯಲಾಗಿದೆ.

ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್ ಅವರ ಬಂಧನದ ಸುದ್ದಿ ಮರೆಯುವ ಮುನ್ನವೇ, ಈ ಹೊಸ ಕೃತ್ಯ ಬೆಳಕಿಗೆ ಬಂದಿದೆ. ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್ಸ್ಟೇಬಲ್ ಜೆ.ಬಿ. ಉಲ್ಲಾ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಸೈಬರ್ ಅಪರಾಧ ಪ್ರಕರಣದಲ್ಲಿ ಬಂಧಿತನಾಗಿದ್ದ ಓರ್ವ ಆರೋಪಿಯನ್ನು ವಿಚಾರಣೆಗಾಗಿ ಪೊಲೀಸರು ಠಾಣೆಗೆ ಕರೆತಂದಿದ್ದರು. ವಿಚಾರಣೆಗೆ ಹೋಗುವ ಮುನ್ನ ಆರೋಪಿಯು ತನ್ನ ಕಾರಿನಲ್ಲಿ ₹11 ಲಕ್ಷ ನಗದಿದ್ದ ಬ್ಯಾಗ್ ಒಂದನ್ನು ಇರಿಸಿದ್ದ. ವಿಚಾರಣೆಯ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಕೋರ್ಟ್ನಿಂದ ಜಾಮೀನು ಪಡೆದು ಆರೋಪಿಯು ಹೊರಬಂದು ತನ್ನ ಕಾರನ್ನು ಪರಿಶೀಲಿಸಿದಾಗ, ಬ್ಯಾಗ್ನಲ್ಲಿದ್ದ ₹11 ಲಕ್ಷ ಹಣ ನಾಪತ್ತೆಯಾಗಿರುವುದು ಗಮನಕ್ಕೆ ಬಂತು. ತಕ್ಷಣವೇ ಆತ ಸೈಬರ್ ಠಾಣೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದನು. ಆರಂಭದಲ್ಲಿ ಗಾಬರಿಗೊಂಡ ಅಧಿಕಾರಿಗಳು, ಕೂಡಲೇ ಠಾಣೆ ಆವರಣದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದರು.
ಸಿಸಿಟಿವಿ ದೃಶ್ಯಾವಳಿಯಲ್ಲಿ ಹೆಡ್ ಕಾನ್ಸ್ಟೇಬಲ್ ಜೆ.ಬಿ. ಉಲ್ಲಾ ಅವರು ಆರೋಪಿಯ ಕಾರಿನ ಬಳಿಗೆ ತೆರಳಿ, ಆ ಬ್ಯಾಗ್ನ್ನು ಆರಾಮವಾಗಿ ತೆಗೆದುಕೊಂಡು ಹೋಗಿರುವುದು ಸ್ಪಷ್ಟವಾಗಿ ಸೆರೆಯಾಗಿತ್ತು. ಕಳ್ಳತನ ಮಾಡಿದ ನಂತರವೂ ಆತ ಹಲವು ದಿನಗಳ ಕಾಲ ಏನೂ ಗೊತ್ತಿಲ್ಲದಂತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಘಟನೆಯ ಕುರಿತು ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ಅವರಿಗೆ ದೂರು ಸಲ್ಲಿಸಿದ ನಂತರ ತನಿಖೆ ತೀವ್ರಗೊಂಡಿತು. ಪೊಲೀಸರು ಜೆಬಿ ಉಲ್ಲಾ ಅವರ ಮನೆಗೆ ಸರ್ಚ್ ಮಾಡಲು ತೆರಳಿದಾಗ, ಆತ ಮೊದಲು ಒಳಗೆ ಬಿಡದೆ ಗಲಾಟೆ ಮಾಡಿದ್ದಾರೆ.
ಪೊಲೀಸರು ಬಲವಂತವಾಗಿ ಮನೆಯ ಒಳಭಾಗವನ್ನು ಪರಿಶೀಲಿಸಿದಾಗ, ಮಲಗುವ ಕೋಣೆಯ ಬೆಡ್ ಕೆಳಗೆ ಲಕ್ಷಾಂತರ ರೂಪಾಯಿ ಹಣವನ್ನು ಜೋಡಿಸಿ ಇಟ್ಟಿರುವುದು ಪತ್ತೆಯಾಯಿತು. ಕದ್ದ ಹಣದಲ್ಲಿಯೇ ಉಲ್ಲಾ ತನ್ನ ಪತ್ನಿಗೆ ಆಭರಣಗಳನ್ನು ಉಡುಗೊರೆಯಾಗಿ ನೀಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಸದ್ಯ, ಅಧಿಕಾರಿಗಳು ಕದ್ದ ಹಣದಲ್ಲಿ ಕೇವಲ ₹2 ಲಕ್ಷ ರೂಪಾಯಿ ಮಾತ್ರ ವಾಪಸ್ ಪಡೆದಿದ್ದಾರೆ.
ಇದನ್ನೂ ಓದಿ : ಖಾಸಗಿ ಚಟುವಟಿಕೆಗಳಲ್ಲಿ ತೊಡಗಿಲ್ಲದ ಮಹಿಳೆಯ ಫೋಟೋ, ವೀಡಿಯೊ ತೆಗೆಯುವುದು ಅಪರಾಧವಲ್ಲ – ಸುಪ್ರೀಂಕೋರ್ಟ್ ಮಹತ್ವದ ಆದೇಶ!







