ಡಿಸಿಎಂ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ – ಇಡ್ಲಿ, ನಾಟಿಕೋಳಿ ಸಾಂಬಾರ್ ಸವಿದ ಸಿದ್ದು!

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಾಹಾರ ಸೇವಿಸಿದರು. ಈ ಭೇಟಿ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದು, ಸಿಎಂ-ಡಿಸಿಎಂ ನಡುವಿನ ಬಾಂಧವ್ಯ ಗಟ್ಟಿಯಾಗಿದ್ದಕ್ಕೆ ಸಾಕ್ಷಿಯಾಗಿದೆ. ಡಿಕೆಶಿ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಹೂಗುಚ್ಛ ನೀಡಿ ಸ್ವಾಗತಿಸಿದರು.

ಬ್ರೇಕ್ ಫಾಸ್ಟ್ ವೇಳೆ, ಸಿಎಂ ಸಿದ್ದರಾಮಯ್ಯ ಅವರ ಇಷ್ಟದ ಖಾದ್ಯವಾದ ನಾಟಿಕೋಳಿ ಸಾಂಬಾರ್ ಅನ್ನು ಡಿಕೆಶಿ ಅವರು ಪ್ರೀತಿಯಿಂದ ಬಡಿಸಿದರು. ಮುಖ್ಯಮಂತ್ರಿಗಳು ಇಡ್ಲಿ ಮತ್ತು ನಾಟಿಕೋಳಿ ಸಾಂಬಾರ್ ಅನ್ನು ಸವಿದರು. ಈ ವೇಳೆ ಸಿದ್ದು ಹಾಗೂ ಡಿಕೆ ಬ್ರದರ್ಸ್ ಜೊತೆ ಜೊತೆಯಾಗಿ ಉಪಾಹಾರ ಸೇವಿಸಿದ್ದು ವಿಶೇಷವಾಗಿತ್ತು. ಕುಣಿಗಲ್ ಶಾಸಕ ರಂಗನಾಥ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಿ.ಕೆ. ಸುರೇಶ್ ಮತ್ತು ಶಾಸಕ ರಂಗನಾಥ್ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಬ್ರೇಕ್ ಫಾಸ್ಟ್ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ಮೊನ್ನೆ ಡಿಕೆಶಿ ನನ್ನ ಮನೆಗೆ ಬಂದಿದ್ದರು, ಇಂದು ನಾನು ಅವರ ಮನೆಗೆ ಉಪಾಹಾರಕ್ಕೆ ಬಂದಿದ್ದೇನೆ. ನಮ್ಮ ಮನೆಯಲ್ಲಿ ವೆಜ್ ಡಿಕೆಶಿ ಮನೆಯಲ್ಲಿ ನಾನ್ ವೆಜ್ ಇತ್ತು. ಅವತ್ತೇ ಡಿಕೆಶಿ ನಮ್ಮ ಮನೆಗೆ ಊಟಕ್ಕೆ ಬನ್ನಿ ಅಂತ ಕರೆದಿದ್ರು” ಎಂದು ಹೇಳಿದರು.

ಈ ಭೇಟಿಯಲ್ಲಿ ರಾಜಕೀಯ ವಿಷಯಗಳ ಕುರಿತು ಚರ್ಚೆ ನಡೆದಿದ್ದು, “ನಾವಿಬ್ಬರೂ ಪಕ್ಷದ ವಿಚಾರಗಳು, ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬಗ್ಗೆ ಚರ್ಚೆ ಮಾಡಿದ್ಧೇವೆ. ನಮ್ಮ ಸರಕಾರ ಯಾವಾಗಲೂ ರೈತರ ಪರವಾಗಿರುತ್ತದೆ” ಎಂದು ಸಿಎಂ ಸ್ಪಷ್ಟಪಡಿಸಿದರು. ನಾಳೆ ಮಂಗಳೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗುವ ಬಗ್ಗೆಯೂ ಅವರು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವಾಗ ಮುಖ್ಯಮಂತ್ರಿಯಾಗುತ್ತಾರೆ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಹೈಕಮಾಂಡ್ ಹೇಳಿದಾಗ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ. ಹೈಕಮಾಂಡ್ ಮೇಲೆ ಎಲ್ಲವೂ ನಿರ್ಧಾರ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ  ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನನ್ನ ಆಹ್ವಾನದಂತೆ ಸಿಎಂ ಬ್ರೇಕ್ ಫಾಸ್ಟ್​ಗೆ ಬಂದಿದ್ದರು. ಬಹಳ ಸಂತೋಷದಿಂದ ನಮ್ಮ ಬ್ರೇಕ್ ಫಾಸ್ಟ್ ಆಯ್ತು ಎಂದು ಹೇಳಿದರು.

ನಾವಿಬ್ಬರೂ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಡಿಸೆಂಬರ್ 8ಕ್ಕೆ ದೆಹಲಿಯಲ್ಲಿ ಸಂಸದರ ಸಭೆ ಇದೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನದ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಡಿಕೆಶಿ ಅವರು, ಹೈಕಮಾಂಡ್ ನಿರ್ಧಾರಕ್ಕೆ ನಾವಿಬ್ಬರೂ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕ್ಲಿನಿಕ್‌ನಲ್ಲಿ ದಾಂಧಲೆ – ಸಿಬ್ಬಂದಿ ಮೇಲೆ ಹಲ್ಲೆಗೈದ ವ್ಯಕ್ತಿ.. ವಿಡಿಯೋ ವೈರಲ್!

Btv Kannada
Author: Btv Kannada

Read More