ಬೆಂಗಳೂರು : ಕಂದಾಯ ಇಲಾಖೆಯ ಸ್ಪೆಷಲ್ ತಹಶೀಲ್ದಾರ್ ಅಧಿಕಾರಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಕಂದಾಯ ಭವನದ ಕಚೇರಿಯ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಖಾತೆ ವರ್ಗಾವಣೆಗಾಗಿ ಸಾರ್ವಜನಿಕರೊಬ್ಬರಿಂದ ಹಣದ ಬೇಡಿಕೆ ಇಟ್ಟ ಸ್ಪೆಷಲ್ ತಹಶೀಲ್ದಾರ್ ವರ್ಷಾ ಅವರ ಮೇಲೆ ಈ ದಾಳಿ ನಡೆದಿದ್ದು, ಲೋಕಾ ತಂಡ ಕಚೇರಿಗೆ ತಲುಪುವಷ್ಟರಲ್ಲಿ ಅಧಿಕಾರಿ ವರ್ಷಾ ಪರಾರಿಯಾಗಿದ್ದಾರೆ.

ರೇಖಾ ಎಂಬುವವರು ದೂರು ನೀಡಿದ್ದಾರೆ. ಅವರು 2014ರಲ್ಲಿ ಕೆಂಗೇರಿ ಗ್ರಾಮದ ಸರ್ವೆ ನಂಬರ್ 121/8 ರಲ್ಲಿ ಸರಸ್ವತಿ ಎಂಬುವವರಿಂದ 2.20 ಗುಂಟೆ ಜಮೀನು ಖರೀದಿಸಿದ್ದರು. ರೇಖಾ ಅವರು ಕಳೆದ ಎರಡು ವರ್ಷಗಳ ಹಿಂದೆಯೇ ಖಾತೆ ವರ್ಗಾವಣೆಗಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅಧಿಕಾರದಲ್ಲಿದ್ದ ಎಸಿ ಶಿವಣ್ಣ ಅವರು ರೇಖಾ ಅವರಿಗೆ ಖಾತೆ ವರ್ಗಾವಣೆ ಮಾಡುವಂತೆ ಆದೇಶ ನೀಡಿದ್ದರು. ಆದೇಶದ ಹೊರತಾಗಿಯೂ, ಸ್ಪೆಷಲ್ ತಹಶೀಲ್ದಾರ್ ವರ್ಷಾ ಅವರು ತಮ್ಮ ಚೇಲಾಗಳ ಮೂಲಕ ರೇಖಾ ಅವರ ಬಳಿ ಖಾತೆ ವರ್ಗಾವಣೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ರೇಖಾ ನಿರಾಕರಿಸಿದಾಗ, ತಹಶೀಲ್ದಾರ್ ವರ್ಷಾ ಅವರು ದೂರುದಾರರನ್ನು ಸತಾಯಿಸಲು ಶುರು ಮಾಡಿದರು. ಅಲ್ಲದೆ, ದಾಖಲೆಗಳಿಲ್ಲ ಎಂದು ಸುಳ್ಳು ಹೇಳಿ ‘ಒರಿಜಿನಲ್ ರೆಕಾರ್ಡ್ ಇಲ್ಲ’ ಎಂಬ ಹಿಂಬರಹ (Endorsement) ನೀಡಲು ಕೂಡ ಸಿದ್ಧತೆ ನಡೆಸಿದ್ದರು.

ಅಧಿಕಾರಿಗಳ ಸತಾಯಿಕೆಯಿಂದ ಬೇಸತ್ತ ರೇಖಾ ಅವರು ನೇರವಾಗಿ ಲೋಕಾಯುಕ್ತ ಅಧಿಕಾರಿಗಳ ಬಳಿ ತೆರಳಿ ತಹಶೀಲ್ದಾರ್ ವರ್ಷಾ ವಿರುದ್ಧ ದೂರು ದಾಖಲಿಸಿದರು. ದೂರಿನ ಅನ್ವಯ, ಲೋಕಾಯುಕ್ತ ತಂಡವು ತಕ್ಷಣವೇ ಕೋರ್ಟ್ ವಾರೆಂಟ್ ಪಡೆದು ಕಂದಾಯ ಭವನಕ್ಕೆ ಲಗ್ಗೆ ಇಟ್ಟಿತು. ಲೋಕಾಯುಕ್ತ ಪೊಲೀಸರ ದಾಳಿಯ ಸುಳಿವು ಅರಿತ ವರ್ಷಾ ಅವರು, ‘ಕೋರ್ಟ್‌ನಲ್ಲಿದ್ದೇನೆ’ ಎಂದು ಸುಳ್ಳು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಡಿವೈಎಸ್ಪಿ ಗಿರೀಶ್ ನೇತೃತ್ವದ ಲೋಕಾ ತಂಡವು ಕಚೇರಿಯಲ್ಲಿ ಶೋಧ ಕಾರ್ಯವನ್ನು ಪೂರ್ಣಗೊಳಿಸಿದೆ. ವರ್ಷಾ ಅವರ ಕಚೇರಿಯಲ್ಲಿ ರೇಖಾ ಅವರ ಒರಿಜಿನಲ್ ಭೂ ದಾಖಲೆಗಳು ಲಭ್ಯವಾಗಿವೆ. ಸ್ಪೆಷಲ್ ತಹಶೀಲ್ದಾರ್ ವರ್ಷಾ ಅವರು ಸಾರ್ವಜನಿಕರನ್ನು ಸುಲಿಗೆ ಮಾಡುವುದರ ಜೊತೆಗೆ ಆಟ ಆಡಿಸಿದ್ದಾರೆ ಎಂದು ಲೋಕಾ ಅಧಿಕಾರಿಗಳು ತಿಳಿಸಿದ್ದಾರೆ. ಪರಾರಿಯಾಗಿರುವ ಭ್ರಷ್ಟ ಅಧಿಕಾರಿಯ ಪತ್ತೆ ಕಾರ್ಯದಲ್ಲಿ ಲೋಕಾಯುಕ್ತ ಪೊಲೀಸರು ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ : ’45’ ಸಿನಿಮಾದ ‘AFRO ಟಪಾಂಗ್’ ಮೇಕಿಂಗ್ ವಿಡಿಯೋ ರಿಲೀಸ್ – ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಮಸ್ತ್ ಡ್ಯಾನ್ಸ್!







