ನವದೆಹಲಿ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟು ಇದೀಗ ನಿರ್ಣಾಯಕ ಹಂತ ತಲುಪಿದೆ. ರಾಜ್ಯ ನಾಯಕತ್ವದ ಗೊಂದಲವನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಭಾನುವಾರ ದೆಹಲಿಯಲ್ಲಿ ಸಂಧಾನ ಸಭೆ ನಡೆಸಲು ಸಿದ್ಧತೆ ನಡೆಸಿದೆ.

ಸಿಎಂ ಕುರ್ಚಿ ಫೈಟ್ ವಿಚಾರವು ನೇರವಾಗಿ ಕಾಂಗ್ರೆಸ್‌ನ ಉನ್ನತ ನಾಯಕತ್ವ, ಸೋನಿಯಾ ಗಾಂಧಿ ಅವರ ಅಂಗಳ ತಲುಪಿದೆ. ಭಾನುವಾರದಂದು ನಡೆಯಲಿರುವ ಈ ಹೈವೋಲ್ಟೇಜ್ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ವರಿಷ್ಠರು ದೆಹಲಿಗೆ ಬರುವಂತೆ ಕರೆ ನೀಡಿದ್ದಾರೆ. ಇಬ್ಬರೂ ನಾಯಕರು ದೆಹಲಿಗೆ ತೆರಳಲಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ತನ್ನ ನಿರ್ಣಯವನ್ನು ನವೆಂಬರ್ 30 ರಂದು ತಿಳಿಸುವ ನಿರೀಕ್ಷೆಯಿದೆ. ಡಿಸೆಂಬರ್ 1 ರಿಂದ ಸಂಸತ್‌ನ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ಕರ್ನಾಟಕದ ರಾಜಕೀಯ ಬಿಕ್ಕಟ್ಟಿಗೆ ಆದಷ್ಟು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಹೈಕಮಾಂಡ್ ತೀರ್ಮಾನಿಸಿದೆ. ಈ ಸಭೆಯು ಕರ್ನಾಟಕದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಹಗ್ಗಜಗ್ಗಾಟಕ್ಕೆ ಹೈಕಮಾಂಡ್ ಯಾವ ಸೂತ್ರದ ಮೂಲಕ “ಮುಲಾಮು” ಹಚ್ಚಲಿದೆ ಎಂದು ನೋಡಬೇಕಿದೆ.

ಇದನ್ನೂ ಓದಿ : ಟ್ರಾಫಿಕ್ ಫೈನ್ 50% ಡಿಸ್ಕೌಂಟ್ಗೆ ಭರ್ಜರಿ ರೆಸ್ಪಾನ್ಸ್ – ಒಂದೇ ವಾರದಲ್ಲಿ 5 ಕೋಟಿಗೂ ಹೆಚ್ಚು ದಂಡ ಸಂಗ್ರಹ!







