ಉಡುಪಿ : ಕಡಲನಗರಿ ಉಡುಪಿ ಜಿಲ್ಲೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಸಂಪೂರ್ಣ ಸಜ್ಜಾಗಿದೆ. ಪ್ರಧಾನಿ ನಮೋ ಅವರಿಗೆ ಭರ್ಜರಿ ಸ್ವಾಗತ ನೀಡಲು ಜಿಲ್ಲಾಡಳಿತ ಹಾಗೂ ಸಾರ್ವಜನಿಕರು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.
ಪ್ರಧಾನಿಯವರು ಮೊದಲು ಐತಿಹಾಸಿಕ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಮಠದ ಸುತ್ತಮುತ್ತಲಿನ ರಥಬೀದಿಯಲ್ಲಿ ಸುಮಾರು 2 ಕಿಲೋಮೀಟರ್ ದೂರದ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಶ್ರೀ ಕೃಷ್ಣ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಬಂಗಾರದ ತೀರ್ಥ ಮಂಟಪವನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಕೃಷ್ಣ ಮಠಕ್ಕೆ ಭೇಟಿ ಕೊಟ್ಟ ನಂತರ ನಡೆಯುವ ಲಕ್ಷ್ಯಕಂಠ ಗೀತಾ ಪಠಣ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಭಗವದ್ಗೀತೆಯ 10 ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ. ಸುಮಾರು 25,000 ಜನ ಕುಳಿತುಕೊಳ್ಳಲು ಸುಸಜ್ಜಿತವಾದ ಬೃಹತ್ ಪೆಂಡಾಲ್ ಅನ್ನು ಸಿದ್ಧಪಡಿಸಲಾಗಿದೆ. ಸಮಾವೇಶದ ನಂತರ 1 ಲಕ್ಷ ಭಕ್ತರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.
ಉಡುಪಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳು : ಬೆಳಗ್ಗೆ 8ಕ್ಕೆ ದೆಹಲಿಯಿಂದ ಹೊರಟಿರುವ ಪ್ರಧಾನಿ ಮೋದಿ ಬೆ.11.05ಕ್ಕೆ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ಬೆ.11:35 ಸೇನಾ ಹೆಲಿಕಾಪ್ಟರ್ ಮೂಲಕ ಉಡುಪಿಯ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಉಡುಪಿಗೆ ಆಗಮಿಸಿದ ಬಳಿಕ ಪ್ರಧಾನಿ ಮೋದಿ ಅವರು ಉಡುಪಿಯ ರಥಬೀದಿಯಲ್ಲಿ ಸುಮಾರು 2 ಕಿಲೋಮೀಟರ್ ದೂರದ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಈ ಮೂಲಕ ಸಾವಿರಾರು ಜನರೊಂದಿಗೆ ಬೆರೆಯಲಿದ್ದಾರೆ. ಚಿನ್ನದ ಕವಚ ಅಳವಡಿಸಿ ನವೀಕರಿಸಲಾದ ಕನಕನ ಕಿಂಡಿಯನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸ್ವರ್ಣ ಖಚಿತ ಕಿಂಡಿಯ ಮೂಲಕ ಅವರು ಶ್ರೀಕೃಷ್ಣದೇವರ ದರ್ಶನ ಪಡೆಯಲಿದ್ದಾರೆ.
ನಂತರ ಉಡುಪಿಯ ಅಷ್ಟಮಠಗಳ ಮಠಾಧೀಶರೊಂದಿಗೆ ಪ್ರಧಾನಿ ಮೋದಿ ಅವರು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಮಠದಲ್ಲಿ ನೆರೆದಿರುವ ವೈದಿಕರು ಉಪನಿಷತ್ತು, ವೇದ ಮತ್ತು ಭಗವದ್ಗೀತೆಯನ್ನು ಪಠಿಸಲಿದ್ದಾರೆ. ಪ್ರಧಾನಿಯವರು ಮಠದ ಆವರಣದಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ : ನಾಳೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ದೆಹಲಿಯಲ್ಲಿ ನಿರ್ಧಾರ!







