ಬೆಂಗಳೂರು : ಬೆಂಗಳೂರಿನಲ್ಲಿ IT-BT ಉದ್ಯೋಗಿ ಎಂದು ಹೇಳಿಕೊಂಡು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಕೇರಳ ಮೂಲದ ಎಂಜಿನಿಯರಿಂಗ್ ಪದವೀಧರನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಾದ್ಯಂತ ಕೊರಿಯರ್ ಮೂಲಕ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಈ ಖತರ್ನಾಕ್ ಡ್ರಗ್ ಪೆಡ್ಲರ್‌ನ ಹೆಸರು ಆದರ್ಶ.

ಕೇರಳದ ಕೊಲ್ಲಂ ಮೂಲದ ಆರೋಪಿ ಆದರ್ಶ ಎಂಜಿನಿಯರಿಂಗ್ ಓದಿದ್ದ. ಆದರೆ ಸುಲಭವಾಗಿ ಹಣ ಗಳಿಸುವ ದುರಾಸೆಗೆ ಬಿದ್ದು ಡ್ರಗ್ಸ್ ದಂಧೆಗಿಳಿದಿದ್ದ. ಈತ ಯಾರಿಗೂ ಅನುಮಾನ ಬಾರದಂತೆ, ತಾನೊಬ್ಬ IT-BT ಎಂಪ್ಲಾಯ್ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದ. ಇಂತಹ ಸೋಗಿನಿಂದಾಗಿ ಪೊಲೀಸರಿಗೂ ಈತನ ಮೇಲೆ ಬೇಗ ಅನುಮಾನ ಬಂದಿರಲಿಲ್ಲ.

ಆದರ್ಶ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಅತ್ಯಂತ ಜಾಣ್ಮೆಯ ಮಾರ್ಗವನ್ನು ಅನುಸರಿಸುತ್ತಿದ್ದ. ಈತ ನೇರವಾಗಿ ಡ್ರಗ್ಸ್ ಮಾರಾಟ ಮಾಡದೆ, ಕೊರಿಯರ್ ಸರ್ವಿಸ್‌ಗಳ ಮೂಲಕ ಡ್ರಗ್ಸ್‌ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದ. ಕೇವಲ ಸಾವಿರ ರೂಪಾಯಿ ಬೆಲೆಯ ಡ್ರಗ್ಸ್‌ಗಳನ್ನು ಡಬಲ್ ರೇಟ್‌ಗೆ, ಅಂದರೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಭಾರೀ ಲಾಭ ಗಳಿಸುತ್ತಿದ್ದ.

ಕೊರಿಯರ್ ಮೂಲಕ ನಡೆಯುತ್ತಿದ್ದ ಡ್ರಗ್ಸ್ ಸಪ್ಲೈನ ಜಾಡು ಹಿಡಿದು ಪೊಲೀಸರು ಕಾರ್ಯಾಚರಣೆ ನಡೆಸಿದರು. ಕೊನೆಗೆ, ಚಿಕ್ಕಜಾಲ ಠಾಣೆಯ ಪೊಲೀಸರು ಅತ್ಯಂತ ಜಾಣ್ಮೆಯಿಂದ ಈ ಡ್ರಗ್ ಪೆಡ್ಲರ್ ಆದರ್ಶನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಆದರ್ಶನಿಂದ ಸುಮಾರು 10 ಗ್ರಾಂ MDMA ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಿಕ್ಕಜಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಡ್ರಗ್ಸ್ ದಂಧೆಯ ಮೂಲ ಮತ್ತು ಸಂಪರ್ಕಗಳ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಕೆಲವೇ ಹೊತ್ತಲ್ಲಿ ಮುರುಘಾ ಶ್ರೀಗಳ ಭವಿಷ್ಯ ನಿರ್ಧಾರ – ಪೋಕ್ಸೋ ಪ್ರಕರಣದಲ್ಲಿ ದೋಷಿಯೋ ? ನಿರ್ದೋಷಿಯೋ ?







