ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ 100 ದಿನಗಳಿಗೂ ಹೆಚ್ಚು ಅವಧಿ ಪೂರೈಸಿದ್ದಾರೆ. ನಟ ದರ್ಶನ್ ಮತ್ತು ಅವರ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಕಳೆದ ಆಗಸ್ಟ್ 14 ರಿಂದ ಪುನಃ ಜೈಲುವಾಸ ಅನುಭವಿಸುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದ ನಟ ದರ್ಶನ್ ಸೇರಿ ಒಟ್ಟು 7 ಆರೋಪಿಗಳ ಜಾಮೀನನ್ನು ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಅಂದೇ ಪೊಲೀಸರು ಅವರನ್ನು ಪುನಃ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಟ ದರ್ಶನ್ ಈ ಪ್ರಕರಣದಲ್ಲಿ A-2 ಆರೋಪಿಯಾಗಿದ್ದು, ಅವರೊಂದಿಗೆ ಗೆಳತಿ ಪವಿತ್ರಾ ಗೌಡ ಮತ್ತು ಪ್ರದೋಶ್ ಸೇರಿದಂತೆ ಹಲವರು ಜೈಲು ಭಾಗ್ಯ ಅನುಭವಿಸುತ್ತಿದ್ದಾರೆ. ನಟ ದರ್ಶನ್ ಅವರಿಗೆ ಇದು ಎರಡನೇ ಬಾರಿಯ ಜೈಲುವಾಸ. ಈ ಹಿಂದೆ ಬಂಧನವಾದಾಗ ಅವರು 131 ದಿನಗಳ ಕಾಲ ಜೈಲಿನಲ್ಲಿದ್ದರು. ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಂದಿಗೆ 105 ದಿನಗಳನ್ನು ಪೂರ್ಣಗೊಳಿಸಿದ್ದಾರೆ.

ಈ ಬಾರಿ ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಮತ್ತು ಅವರ ಗ್ಯಾಂಗ್‌ಗೆ ಫುಲ್ ಟೈಟ್ ಸಿಸ್ಟಂ ಜಾರಿಯಾಗಿದೆ, ಪ್ರತಿಯೊಂದು ಸೌಲಭ್ಯಕ್ಕೂ ನ್ಯಾಯಾಲಯದ ಮೊರೆ ಹೋಗುವ ಸನ್ನಿವೇಶ ಎದುರಾಗಿದೆ. ದರ್ಶನ್ ಮತ್ತು ಗ್ಯಾಂಗ್ ಹಾಸಿಗೆ, ಬೆಡ್ ಶೀಟ್, ದಿಂಬು ಹಾಗೂ ವಾಕ್ ಮಾಡಲು ಜಾಗದಂತಹ ಸೌಲಭ್ಯಗಳಿಗೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸಿದ್ದಾರೆ. ವಿಚಾರಣೆ ವೇಳೆ ನಟ ದರ್ಶನ್ ನ್ಯಾಯಾಧೀಶರ ಮುಂದೆ ತೀವ್ರ ಅಳಲು ತೋಡಿಕೊಂಡಿದ್ದರು. ನನಗೆ ಬಿಸಿಲು ಬೀಳುತ್ತಿಲ್ಲ, ಚರ್ಮಕ್ಕೆ ಫಂಗಸ್ ಆಗಿದೆ ಎಂದು ಕಣ್ಣೀರು ಹಾಕಿದ್ದರು. ನನಗೆ ವಿಷ ಕೊಟ್ಟು ಬಿಡಿ ಎಂದೂ ನ್ಯಾಯಾಧೀಶರ ಬಳಿ ಮನವಿ ಮಾಡಿದ್ದರು.

ಸದ್ಯ ಈ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಪಟ್ಟಿ ಸಿದ್ಧಪಡಿಸಿದೆ. ಶೀಘ್ರದಲ್ಲೇ ಪ್ರಕರಣದ ವಿಚಾರಣೆಯ (Trial) ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಜಾಮೀನು ಸಿಗುವವರೆಗೂ ನಟ ದರ್ಶನ್‌ಗೆ ಜೈಲುವಾಸವೇ ಗತಿ.
ಇದನ್ನೂ ಓದಿ : ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಾರಿ ಅಕ್ರಮ – ಕೈದಿಗಳಿಂದಲೇ ಮದ್ಯ ತಯಾರಿಕೆ!







