4ನೇ ಮಗುವೂ ಹೆಣ್ಣು ಎಂದು ಹಸುಗೂಸನ್ನು ಕೊಂದ ಪಾಪಿ ತಾಯಿ!

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಮತ್ತು ಹೃದಯವಿದ್ರಾವಕ ಘಟನೆ ನಡೆದಿದೆ. ಹೆಣ್ಣು ಮಗು ಜನಿಸಿದೆ ಎಂಬ ಒಂದೇ ಕಾರಣಕ್ಕೆ ತಾಯಿಯೊಬ್ಬಳು ಕೇವಲ ಮೂರು ದಿನದ ತನ್ನ ಹಸುಗೂಸಿನ ಕತ್ತು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಗ್ರಾಮ.

ಅಶ್ವಿನಿ ಹಳಕಟ್ಟಿ (28). ಅಶ್ವಿನಿ ಅವರಿಗೆ ಈ ಹಿಂದೆ ಈಗಾಗಲೇ ಮೂರು ಹೆಣ್ಣು ಮಕ್ಕಳಿದ್ದು, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ. ನವೆಂಬರ್ 23 ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿತ್ತು. ಮರುದಿನವೇ ತಾಯಿ ಅಶ್ವಿನಿ ಹಿರೇಮುಲಂಗಿಯಲ್ಲಿರುವ ತನ್ನ ತಾಯಿಯ ಮನೆಗೆ ಬಂದಿದ್ದರು. ಬೆಳಿಗ್ಗೆ ತಾಯಿ ಮನೆಯವರು ಹೊರಗೆ ಹೋದ ಸಂದರ್ಭವನ್ನು ಬಳಸಿಕೊಂಡು, ಅಶ್ವಿನಿ ತನ್ನ ಕೇವಲ ಮೂರು ದಿನದ ಹೆಣ್ಣು ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಮಗುವಿನ ಕತ್ತು ಹಿಸುಕಿ ಕೊಂದ ನಂತರ, ಅಶ್ವಿನಿ ಅವರು ಮಗು ಉಸಿರಾಡುತ್ತಿಲ್ಲ ಎಂದು ಹೇಳಿ ನಾಟಕವಾಡಿದ್ದಾರೆ. ನಂತರ ಮಗುವನ್ನು ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆ ತಂದಾಗ, ವೈದ್ಯರು ಮಗುವನ್ನು ಪರೀಕ್ಷಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿನ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ, ರಾಮದುರ್ಗ ಪೊಲೀಸರು ಆರೋಪಿ ತಾಯಿ ಅಶ್ವಿನಿ ಹಳಕಟ್ಟಿ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಸುದ್ದಿ ತಿಳಿದ ತಕ್ಷಣ ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸುರೇಶಬಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ : ಸಿಎಂ ಭೇಟಿ ಮಾಡಿದ 2024ರ ಬ್ಯಾಚ್ನ IPS ಅಧಿಕಾರಿಗಳ ತಂಡ – ಪೊಲೀಸ್ ವೃತ್ತಿ ಜೀವನಕ್ಕೆ ಶುಭಾಶಯ ಕೋರಿದ ಸಿದ್ದರಾಮಯ್ಯ!

Btv Kannada
Author: Btv Kannada

Read More