ತಿರುವೀರ್ – ಐಶ್ವರ್ಯಾ ರಾಜೇಶ್ ನಟನೆಯ ಹೊಸ ಚಿತ್ರಕ್ಕೆ ಅದ್ಧೂರಿ ಮುಹೂರ್ತ – ಕನ್ನಡ ಸೇರಿ 4 ಭಾಷೆಗಳಲ್ಲಿ ಸಿನಿಮಾ ತೆರೆಗೆ!

ತಿರು ವೀರ್, ಐಶ್ವರ್ಯಾ ರಾಜೇಶ್ ನಟನೆಯ ಗಂಗಾ ಎಂಟರ್‌ಟೈನ್‌ಮೆಂಟ್ಸ್ ಪ್ರೊಡಕ್ಷನ್ ನಂ. 2 ಚಿತ್ರಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಈ ಮೂಲಕ ಬ್ಲಾಕ್‌ಬಸ್ಟರ್ ‘ಪ್ರಿ ವೆಡ್ಡಿಂಗ್ ಶೋ’ ಚಿತ್ರದ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಯುವ ನಾಯಕ ತಿರು ವೀರ್, ತಮ್ಮ ಮುಂದಿನ ಪ್ರಾಜೆಕ್ಟ್‌ ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಂಕ್ರಾಂತಿಗೆ ಬಂದ ‘ಸಂಕ್ರಾಂತಿಕಿ ವಸ್ತುನ್ನಾಂ’ ಚಿತ್ರದ ಯಶಸ್ಸಿನ ನಂತರ ನಾಯಕಿ ಐಶ್ವರ್ಯಾ ರಾಜೇಶ್ ಅವರು ಈ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ಭರತ್ ದರ್ಶನ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮಹೇಶ್ವರ ರೆಡ್ಡಿ ಮೂಲಿ ಅವರು ಗಂಗಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇದು ಅವರ ಎರಡನೇ ಪ್ರಾಜೆಕ್ಟ್ ಆಗಿದೆ.

‘ಶಿವಂ ಭಜೆ’ ಚಿತ್ರದಿಂದ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ, ಗಂಗಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆ, ಇದೀಗ ನಿರ್ದೇಶಕ ಭರತ್ ದರ್ಶನ್ ಅವರ ಕಥೆಗೆ ಬಂಡವಾಳ ಹೂಡುತ್ತಿದೆ. ಅಂದಹಾಗೆ, ಇಂದು  ( ನವೆಂಬರ್ 9) ಚಿತ್ರದ ಪಾತ್ರ ಮತ್ತು ತಾಂತ್ರಿಕ ಬಳಗದ ಸಮ್ಮುಖದಲ್ಲಿ ಹೈದರಾಬಾದ್ ನಲ್ಲಿ ಮುಹೂರ್ತ ನೆರವೇರಿತು. ತಮ್ಮ ಗಟ್ಟಿ ಕಂಟೆಂಟ್ ಮೂಲಕವೇ ಹೆಸರುವಾಸಿಯಾದ ತಿರು ವೀರ್ ಅವರು, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ಮಸೂದ’ ದಿಂದ ಇತ್ತೀಚಿನ ‘ಪ್ರಿ ವೆಡ್ಡಿಂಗ್ ಶೋ’ ವರೆಗೆ ಬಗೆಬಗೆ ಕಥೆಗಳ ಮೂಲಕ ಜಗಮೆಚ್ಚಿಸಿದ್ದಾರೆ.

ಈ ಚಿತ್ರದಲ್ಲಿ ಪ್ರತಿಭಾವಂತ ತಂತ್ರಜ್ಞರ ತಂಡವಿದೆ. ‘ರಜಾಕಾರ್’ ಮತ್ತು ‘ಪೋಲಿಮೇರ’ ಚಿತ್ರಗಳಿಗೆ ಕೆಲಸ ಮಾಡಿದ ಛಾಯಾಗ್ರಾಹಕ ಸಿ ಎಚ್ ಕುಶೇಂದರ್ ಇಲ್ಲಿಯೂ ಕ್ಯಾಮರಾ ನಿರ್ವಹಿಸಲಿದ್ದಾರೆ. ಭರತ್ ಮಂಚಿರಾಜು ಸಂಗೀತ ಸಂಯೋಜನೆ ಮಾಡಲಿದ್ದಾರೆ. ‘ಬಲಗಂ’ ಖ್ಯಾತಿಯ ತಿರುಮಲ ಎಂ. ತಿರುಪತಿ ಕಲಾ ನಿರ್ದೇಶಕರಾಗಿದ್ದರೆ, ‘ಕಾ’ ಖ್ಯಾತಿಯ ಶ್ರೀ ವರಪ್ರಸಾದ್ ಅವರು ಎಡಿಟರ್. ಚಿತ್ರದ ಚಿತ್ರೀಕರಣವು ಈ ತಿಂಗಳ 19 ರಿಂದ ಪ್ರಾರಂಭವಾಗಲಿದೆ. ಈ ಚಿತ್ರವು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ದೆಹಲಿ ಸ್ಫೋಟದ ಬೆನ್ನಲ್ಲೇ ಬೆಂಗಳೂರಲ್ಲಿ ಹೈ ಅಲರ್ಟ್​ – ಹದ್ದಿನ ಕಣ್ಣಿಟ್ಟ ಪೊಲೀಸರು!

Btv Kannada
Author: Btv Kannada

Read More