ಚಿಕ್ಕಮಗಳೂರು : ಕಳ್ಳತನ ಮಾಡಲು ಅಂಗಡಿಯೊಳಗೆ ನುಗ್ಗಿದ ಕಳ್ಳನೊಬ್ಬ, ಮೊದಲು ಅಲ್ಲಿನ ದೇವರ ಮೂರ್ತಿಗೆ ಕೈಮುಗಿದು ನಮಸ್ಕರಿಸಿ, ನಂತರ ಕಳ್ಳತನಕ್ಕೆ ಇಳಿದ ಘಟನೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಈ ವಿಚಿತ್ರ ಕಳ್ಳತನವೊಂದು ನಡೆದಿದೆ.

ತರೀಕೆರೆ ಪಟ್ಟಣದ ಮಂಜುನಾಥ್ ಪೈಂಟ್ ಅಂಡ್ ಹಾರ್ಡ್ವೇರ್ ಅಂಗಡಿ, ಮುಖ ಮುಚ್ಚಿಕೊಂಡು ಅಂಗಡಿ ಪ್ರವೇಶಿಸಿದ ಕಳ್ಳ, ನೇರವಾಗಿ ತಿಜೋರಿಗೆ ಕನ್ನ ಹಾಕುವ ಮೊದಲು, ಅಂಗಡಿಯಲ್ಲಿದ್ದ ಪುಟ್ಟ ದೇವರಿಗೆ ಭಕ್ತಿಯಿಂದ ಕೈಮುಗಿದಿದ್ದಾನೆ. ತಿಜೋರಿಯಲ್ಲಿದ್ದ ಸುಮಾರು ₹ 80 ಸಾವಿರ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

ಕಳ್ಳನ ಈ ವಿಶಿಷ್ಟ ‘ಕೈಚಳಕ’ ಸಂಪೂರ್ಣವಾಗಿ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ದೇವರ ಮೇಲೆ ಭಕ್ತಿ ಇರುವ ವ್ಯಕ್ತಿ ಈ ರೀತಿ ಕಳ್ಳತನ ಮಾಡಿರುವುದು ಸ್ಥಳೀಯರಲ್ಲಿ ಮತ್ತು ಪೊಲೀಸರಲ್ಲಿ ಅಚ್ಚರಿ ಮೂಡಿಸಿದೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕಳ್ಳನ ಪತ್ತೆಗಾಗಿ ತೀವ್ರ ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ದಾರುಣ ಘಟನೆ – ಕಾಲು ಜಾರಿ ಬಿದ್ದ ಬಾಲಕಿ ರಕ್ಷಣೆಗೆ ಹೋಗಿ ನಾಲ್ವರು ಮಕ್ಕಳು ನೀರುಪಾಲು!







