ಇನ್ಫೋಸಿಸ್​ ನವರೇನು ಬೃಹಸ್ಪತಿಗಳಾ? ಇದು 7 ಕೋಟಿ ಜನರ ಸಮೀಕ್ಷೆ – ಸಿಎಂ ಸಿದ್ದರಾಮಯ್ಯ ಟಾಂಗ್!

ಮೈಸೂರು : ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಸಾಮಾಜಿಕ -ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದು ನಿರಾಕರಿಸಿರುವುದು ಭಾರೀ ಸುದ್ದಿಯಾಗಿದೆ. ಕಾಂಗ್ರೆಸ್​ನ ಹಲವು ನಾಯಕರು ದಂಪತಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮೈಸೂರಿನ ಸಿಎಂ ಸಿದ್ದರಾಮಯ್ಯ ಮಾತನಾಡಿ, ಇನ್ಫೋಸಿಸ್​ನವರೇನು ಬೃಹಸ್ಪತಿಗಳಾ, ನಾವು ನಡೆಸುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ, ಅವರಿಗೆ ಅದು ಅರ್ಥವಾಗದಿದ್ದರೆ ನಾವು ಏನು ಮಾಡಲು ಸಾಧ್ಯ ಎಂದು ಹೇಳಿದರು.

ಇದು ಹಿಂದುಳಿದವರ ಸಮೀಕ್ಷೆಯಲ್ಲ, ಇಡೀ ರಾಜ್ಯದ ಏಳು ಕೋಟಿ ಜನರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎಂದು 20 ಸಲ ಹೇಳಿದ್ದೇವೆ. ಜಾಹಿರಾತು ಕೂಡ ಕೊಟ್ಟಿದ್ದೇವೆ. ನಮ್ಮ ಸರ್ಕಾರ ಶಕ್ತಿ, ಗೃಹಲಕ್ಷ್ಮಿ, ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದೇವೆ. ಅವುಗಳ ಲಾಭವನ್ನು ಮೇಲ್ಜಾತಿಯವರು ಪಡೆದುಕೊಳ್ಳುವುದಿಲ್ಲವೇ, ನಾರಾಯಣ ಮೂರ್ತಿ, ಸುಧಾಮೂರ್ತಿಯವರು ಇದು ಹಿಂದುಳಿದ ವರ್ಗದವರ ಸಮೀಕ್ಷೆ ಎಂದು ಭಾವಿಸಿದರೆ ಅದು ತಪ್ಪು. ಇದು ಎಲ್ಲಾ ಜಾತಿಯವರಿಗೆ ಮಾಡುತ್ತಿರುವ ಸಮೀಕ್ಷೆ. ಮುಂದೆ ಕೇಂದ್ರ ಸರ್ಕಾರ ಜನಗಣತಿ ಮಾಡುತ್ತದೆ, ಆಗ ಅವರು ಏನು ಹೇಳುತ್ತಾರೆ ಎಂದು ಕೇಳಿದರು. ಅವರಿಗೆ ತಪ್ಪು ಮಾಹಿತಿ ಇರಬಹುದು, ಏನಿದ್ದರೂ ಅವರ ಇಷ್ಟ ಎಂದರು.

ಇದೇ ವೇಳೆ ಗುತ್ತಿಗೆದಾರರ ಸಂಘದಿಂದ ಕಮಿಷನ್ ಆರೋಪ ಸಂಬಂಧ ಪ್ರತಿಕ್ರಿಯಿಸಿ, ಅದು ಸತ್ಯವಾಗಿದ್ರೆ ಅವರಿಗೆ ಕೋರ್ಟ್‌ಗೆ ಹೋಗುವುದಕ್ಕೆ ಹೇಳಿ. ಯಾರೋ ಇದನ್ನ ಅವರ ಬಳಿ ಹೇಳಿಸುತ್ತಿದ್ದಾರೆ. ಐಟಿ ಕಂಪನಿಗಳು ಆಂಧ್ರ ಪಾಲಾದ ವಿಚಾರವಾಗಿ, ಅಯಾ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜ್ಯಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಕಂಪನಿ ಬೇರೆ ರಾಜ್ಯಕ್ಕೆ ಹೋದ ಕೂಡಲೇ ಇಲ್ಲಿನ ವ್ಯವಸ್ಥೆ ಸರಿ ಇಲ್ಲ ಎಂದು ಹೇಳುವುದು ತಪ್ಪು. ಹೂಡಿಕೆಗಳ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಹಾಗಾದರೆ ಅವರೆಲ್ಲ ಯಾಕೆ ನಮ್ಮಲ್ಲಿ ಉಳಿದುಕೊಂಡರು ಎಂದು ಸಿಎಂ ಹೇಳಿದರು.

ಇದನ್ನೂ ಓದಿ : ಹವಾಮಾನ ವೈಪರೀತ್ಯದಿಂದ ಡಿಸಿಎಂ ಡಿಕೆಶಿ ಕೊಡಗು ಪ್ರವಾಸ ರದ್ದು!

Btv Kannada
Author: Btv Kannada

Read More