ಬೆಂಗಳೂರು : ನನಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ, ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಹಾಗಾಗಿ ಜಾತಿಗಣತಿ ಬಹಿಷ್ಕರಿಸಿ ಎಂದು ರಾಜ್ಯದ ಜನತೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರೆ ಕೊಟ್ಟಿದ್ದಾರೆ.
ಈ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ. ನಂಗೆ ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಇಲ್ಲ. ಹೀಗಾಗಿ, ಸರ್ಕಾರದ ಮೇಲೆ ನಂಬಿಕೆ ಇರದೇ ಇರೋದ್ರಿಂದ ಇದರಲ್ಲಿ ಪಾಲ್ಗೊಳ್ಳಲ್ಲ. ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಜಾತಿ ಜಾತಿ ಮಧ್ಯೆ ಗಲಾಟೆ ತರಲು ಮಾತ್ರ ಇದನ್ನು ಮಾಡುತ್ತಿದ್ದಾರೆ. ದಯವಿಟ್ಟು ನೀವು ಇದರಲ್ಲಿ ಪಾಲ್ಗೊಳ್ಳಬೇಡಿ ಎಂದು ತಿಳಿಸಿದ್ದಾರೆ.
ಜಾತಿ ಗಣತಿಯು ರಾಜಕೀಯ ಪ್ರೇರಿತವಾಗಿದ್ದು, ಲಾಲು ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರಂತಹ ನಾಯಕರು ಮಾಡಿದ ತಂತ್ರಗಳಂತೆಯೇ ಇಲ್ಲಿಯೂ ಬಳಕೆ ಮಾಡಲಾಗುತ್ತಿದೆ. ಇದು ಸಮುದಾಯಗಳನ್ನು ವಿಭಜಿಸುವ ಪ್ರಯತ್ನವಾಗಿದೆ. ಭಾಗವಹಿಸುವಿಕೆ ಸ್ವಯಂಪ್ರೇರಿತವಾಗಿದೆ, ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ ಎಂದಿದ್ದಾರೆ.
ತೇಜಸ್ವಿ ಸೂರ್ಯ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಜನರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಮತ್ತು ನ್ಯಾಯಾಲಯದ ನಿರ್ದೇಶನದಂತೆ ನಾವು ಸಮೀಕ್ಷೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. ಈಗಾಗಲೇ 10 ಲಕ್ಷ ಜನರನ್ನು ಸಮೀಕ್ಷೆ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಗುರುವಾರ ಸಮೀಕ್ಷೆಯನ್ನು ನಿಲ್ಲಿಸಲು ನಿರಾಕರಿಸಿದೆ ಆದರೆ ಸಂಗ್ರಹಿಸಿದ ದತ್ತಾಂಶದ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ನಾಗರಿಕರ ಸ್ವಯಂಪ್ರೇರಿತ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶನ ನೀಡಿದೆ ಎಂದರು.







