ಬೆಂಗಳೂರು : ಕಾಂಗ್ರೆಸ್ನ ಮತ್ತೊಬ್ಬ ಶಾಸಕನ ವಿರುದ್ಧ ಆದಾಯ ಮೀರಿ ಆಸ್ತಿಗಳಿಕೆ ಆರೋಪ ಕೇಳಿಬಂದಿದೆ. ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡಗೆ ಹೊಸ ಸಂಕಷ್ಟ ಶುರುವಾಗಿದ್ದು, ಅಕ್ರಮವಾಗಿ ಬರೋಬ್ಬರಿ 124 ಕೋಟಿ ಆಸ್ತಿ ಗಳಿಸಿರುವ ಆರೋಪದಡಿ ಹಾಸನ/ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ಶಾಸಕ ರಾಜೇಗೌಡ ಮಾತ್ರ ಅಲ್ಲದೆ, ಅವರ ಪತ್ನಿ ಪುಷ್ಪಾ ಮತ್ತು ಮಗ ರಾಜ್‌ದೇವ್ ಅವರ ವಿರುದ್ದವೂ ಪ್ರಕರಣ ದಾಖಲಾಗಿದೆ. ಜನಪ್ರತಿನಿಧಿಗಳ ಕೋರ್ಟ್ ಆದೇಶದ ಮೇರೆಗೆ IPC 120 (B), 420, 193, 200 ಕಾಲಂಗಳ ಅಡಿಯಲ್ಲಿ FIR ದಾಖಲಿಸಲಾಗಿದ್ದು, ಸದ್ಯ ಈ ಪ್ರಕರಣ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

2022ರಲ್ಲಿ ಬಿಜೆಪಿ ಮುಖಂಡ ದಿನೇಶ್ ಹೊಸೂರು ಎಂಬುವರು ರಾಜೇಗೌಡ ಹಾಗೂ ಅವರ ಕುಟುಂಬದ ವಿರುದ್ಧ ದೂರು ನೀಡಿದ್ದರು. ದೂರಿನಲ್ಲಿ, ರಾಜೇಗೌಡರ ವಾರ್ಷಿಕ ಆದಾಯ ಕೇವಲ 38 ಲಕ್ಷ ರೂಪಾಯಿ ಇದ್ದರೂ, ಅವರು 124 ಕೋಟಿ ಬೆಲೆಯ ಭೂಮಿಯನ್ನು ಹೇಗೆ ಖರೀದಿಸಿದರು ಎಂದು ಪ್ರಶ್ನೆ ಮಾಡಲಾಗಿತ್ತು.

ಶೃಂಗೇರಿ MLA ಟಿ.ಡಿ ರಾಜೇಗೌಡ ಕುಟುಂಬದ ಅಸಲಿ ಆಸ್ತಿ ಎಷ್ಟು? ಅಕ್ರಮ ಎಷ್ಟು? MLA ಟಿ.ಡಿ ರಾಜೇಗೌಡ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಕೇಳಿಬಂದಿದ್ದು, ಕೆಲವೇ ವರ್ಷಗಳಲ್ಲಿ ಲಕ್ಷದಿಂದ ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ ಈ ‘ಕೈ’ MLA. ಹೌದು.. 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಕಾಂಗ್ರೆಸ್ನ ಟಿ.ಡಿ ರಾಜೇಗೌಡ, ತಮ್ಮ ಆದಾಯ 34 ಲಕ್ಷ ರೂ. ಎಂದು ಘೋಷಿಸಿದ್ದರು. 2018ರಲ್ಲಿ 34 ಲಕ್ಷ ರೂಪಾಯಿ ಆದಾಯ ಘೋಷಿಸಿಕೊಂಡಿದ್ದ MLA ಟಿ.ಡಿ ರಾಜೇಗೌಡ, 2023ರ ವೇಳೆಗೆ 44 ಲಕ್ಷ ರೂ. ಆದಾಯ ತೋರಿಸಿದ್ದರು.

ಆದ್ರೆ ಆ ಬಳಿಕ ಇದ್ದಕ್ಕಿಂದ್ದಂತೆ ಟಿ.ಡಿ ರಾಜೇಗೌಡ ಬರೋಬ್ಬರಿ 266 ಎಕರೆ ಕಾಫಿ ತೋಟ ಖರೀದಿಸಿದ ಆರೋಪ ಕೇಳಿಬಂದಿದೆ. 123 ಕೋಟಿ ರೂ. ಬ್ಯಾಂಕ್ ಸಾಲವಿದ್ದ ಸಂದರ್ಭದಲ್ಲಿ 266 ಎಕರೆ ಕಾಫಿ ತೋಟ ಖರೀದಿ ಮಾಡಿರುವ ರಾಜೇಗೌಡ, 266 ಎಕರೆ ಕಾಫಿ ತೋಟ ಖರೀದಿ ವಿಚಾರವನ್ನು ಎಲ್ಲೂ ಪ್ರಸ್ತಾಪಿಸಿರಲಿಲ್ಲ. ಈ ಖರೀದಿಯ ವಿವರವನ್ನು ಚುನಾವಣಾ ಇಲಾಖೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರಲಿಲ್ಲ ಎನ್ನಲಾಗಿದೆ. ಕಾಫಿ ತೋಟವನ್ನು ಪತ್ನಿ, ಪುತ್ರ ಮತ್ತು ಸಹೋದರರ ಹೆಸರಿನಲ್ಲಿ ಖರೀದಿಸಲಾಗಿದ್ದು, ತೋಟದ ಶೇ.33ರಷ್ಟು ಹಂಚಿಕೆಯನ್ನು ಮೂವರ ಹೆಸರಿನಲ್ಲಿ ಮಾಡಲಾಗಿದೆ. ಇದು ಅಕ್ರಮ ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಕಾರಣವಾಗಿದೆ.

ದೂರಿನ ಪ್ರಕಾರ, ಖರೀದಿಸಿದ ಭೂಮಿ ಮೇಲೆ 123 ಕೋಟಿ ರೂಪಾಯಿ ಬ್ಯಾಂಕ್ ಸಾಲವಿತ್ತು, ಆದ್ರೂ ಭೂಮಿ ಖರೀದಿ ಮಾಡಲಾಗಿತ್ತು. ಈವರೆಗೆ ರಾಜೇಗೌಡರ ಪತ್ನಿ ಪುಷ್ಪಾ ಅವರು 16 ಕೋಟಿ ರೂಪಾಯಿ ನೀಡಿ ಸಾಲವನ್ನು ತೀರಿಸಿದ್ದಾರೆ. ಅದೇ ದಿನ ಎನ್.ಆರ್.ಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬ್ಯಾಂಕ್ ಸಾಲ ತೀರಿದೆ ಎಂದು ರಿಲೀಸ್ ಡೀಡ್ ಮಾಡಿಸಲಾಗಿದೆ. ಇದೀಗ ಬಿಜೆಪಿ ಮುಖಂಡ ದಿನೇಶ್ ಹೊಸೂರು ದಿನೇಶ್ ಹೊಸೂರು ಅವರು ನೀಡಿದ ದೂರು ಆಧಾರವಾಗಿ ಕೋರ್ಟ್ ತನಿಖೆಗೆ ಮಹತ್ವದ ಆದೇಶ ನೀಡಿದ್ದು, 60 ದಿನಗಳೊಳಗೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ. ಹೀಗಾಗಿ ಟಿ.ಡಿ ರಾಜೇಗೌಡರ ಆದಾಯ ಮೂಲ, ಬ್ಯಾಂಕ್ ಸಾಲದ ಬಗ್ಗೆ ಲೋಕಾಯುಕ್ತ ತನಿಖೆ ಕೈಗೊಳ್ಳಲಿದೆ.


ಇದನ್ನೂ ಓದಿ : ಬೆಳಿಗ್ಗೆ ಅರ್ಚಕ, ರಾತ್ರಿ ಕಳ್ಳ – ದೇವಾಲಯದಲ್ಲಿ ಚಿನ್ನಾಭರಣ ದೋಚುತ್ತಿದ್ದ ಇಬ್ಬರು ಖತರ್ನಾಕ್ ಖದೀಮರ ಬಂಧನ!







