ಕನ್ನಡ ಜನತೆಯಿಂದ ಬಹುನಿರೀಕ್ಷಿತ ‘ಕಾಂತಾರ ಅಧ್ಯಾಯ 1’ ಚಿತ್ರದ ಟ್ರೇಲರ್ ರಿಲೀಸ್!

ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ವಿಶ್ವವೇ ಎದುರು ನೋಡುತ್ತಿರುವ ಬಹುನಿರೀಕ್ಷಿತ “ಕಾಂತಾರ ಅಧ್ಯಾಯ 1” ಚಿತ್ರ ಸಪ್ತ ಭಾಷೆಗಳಲ್ಲಿ ಅಕ್ಟೋಬರ್ 2 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಸೆಪ್ಟೆಂಬರ್ 22 ರ ಸೋಮವಾರ ಮಧ್ಯಾಹ್ನ 12:45ಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಟ್ರೇಲರ್ ಅನಾವರಣವಾಗಲಿದೆ.

ಹಿಂದಿ ಟ್ರೇಲರ್ ಅನ್ನು ಹೃತಿಕ್ ರೋಶನ್, ತಮಿಳಿನ ಟ್ರೇಲರ್ ಅನ್ನು ಶಿವಕಾರ್ತಿಕೇಯನ್, ಮಲಯಾಳಂನ ಟ್ರೇಲರ್ ಅನ್ನು ಪೃಥ್ವಿರಾಜ್ ಸುಕುಮಾರನ್ ಹಾಗೂ ತೆಲುಗು ಭಾಷೆಯ ಟ್ರೇಲರ್ ಅನ್ನು ಪ್ರಭಾಸ್ ಅವರು ಅನಾವರಣ ಮಾಡಲಿದ್ದಾರೆ. ಕನ್ನಡದ ಕಲಾಭಿಮಾಗಳಿಂದಲೇ ಕನ್ನಡದ “ಕಾಂತಾರ” ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿರುವುದು ವಿಶೇಷ. ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಮೇಕಿಂಗ್ ವಿಡಿಯೋ, ಪೋಸ್ಟರ್ ಗಳಿಗೆ ಫಿದಾ ಆಗಿರುವ ಅಭಿಮಾನಿಗಳು ಅಕ್ಟೋಬರ್ 2ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ತೆರೆಯ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ ಹಾಗೂ ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ “ಕಾಂತಾರ” ಚಿತ್ರಕ್ಕಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ ಅಧ್ಯಾಯ 1’ ಚಿತ್ರವು ಕಲೆ, ಭಕ್ತಿ ಮತ್ತು ಶಕ್ತಿಯನ್ನು ಒಳಗೊಂಡಿರುವ ಚಿತ್ರವಾಗಿದ್ದು, ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಹೊಂಬಾಳೆ ಫಿಲಂಸ್ ನಿಂದ ಮತ್ತೊಂದು ಅದ್ಭುತ ಚಿತ್ರ ವಿಶ್ವದ ಸಿನಿಪ್ರೇಮಿಗಳಿಗೆ ಜನರಿಗೆ ವೀಕ್ಷಿಸಲು ಸಿಗುವುದಂತೂ ಖಂಡಿತ.

ಇದನ್ನೂ ಓದಿ : ದಸರಾ ಹಬ್ಬಕ್ಕೆ ಗ್ರಾಹಕರಿಗೆ ಸಿಹಿಸುದ್ದಿ : ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ದರ ಇಳಿಕೆ.. ಯಾವುದಕ್ಕೆ ಎಷ್ಟು ಬೆಲೆ? ಇಲ್ಲಿದೆ ಲಿಸ್ಟ್​!

Btv Kannada
Author: Btv Kannada

Read More