ಬೆಂಗಳೂರು : ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ನಡುವೆ ನಡೆದ ಈ ಮಾರಾಮಾರಿಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕ್ಷುಲ್ಲಕ ಕಾರಣಕ್ಕೆ ಜೂನಿಯರ್ ಮತ್ತು ಸೀನಿಯರ್ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಸಿಕ್ಕ ಸಿಕ್ಕ ವಸ್ತುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸಿನಿಮಾ ಶೈಲಿಯಲ್ಲಿ ಎರಡು ಗುಂಪುಗಳಾಗಿ ಭಾರೀ ಫೈಟ್ ಮಾಡಿದ್ದು, ಗೂಳಿ ಕಾಳಗದಂತೆ ನೂರಾರು ವಿದ್ಯಾರ್ಥಿಗಳು ರಸ್ತೆಯಲ್ಲಿ ಪರಸ್ಪರ ಬಡಿದಾಡಿದ್ದಾರೆ. ಸದ್ಯ ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಲಾಟೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಹುದು ಎಂದು ಕಾಲೇಜು ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಯಾವುದೇ ಅಧಿಕೃತ ದೂರು ದಾಖಲಿಸದೆ, ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಮುಂದೆ ಈ ರೀತಿ ಮಾಡುವುದಿಲ್ಲ ಎಂದು ‘ತಪ್ಪೊಪ್ಪಿಗೆ ಪತ್ರ’ ಬರೆಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪೊಲೀಸರು ವಿದ್ಯಾರ್ಥಿಗಳನ್ನು ತೀವ್ರ ವಿಚಾರಣೆ ನಡೆಸಿದ್ದು, ಹೊಡೆದಾಟಕ್ಕೆ ಕಾರಣವೇನೆಂದು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ವೀಡಿಯೋ ಸಾಕ್ಷಿ ಹಿಡಿದು ಕೆಲ ವಿದ್ಯಾರ್ಥಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ರಾತ್ರಿಯಿಡೀ ವರುಣನ ಆರ್ಭಟ – ಕೆರೆಯಂತಾದ ರಸ್ತೆಗಳು, ಜನಜೀವನ ಅಸ್ತವ್ಯಸ್ತ.. ಇನ್ನೂ ಒಂದು ವಾರ ಮಳೆ ಫಿಕ್ಸ್!







