ಬೆಂಗಳೂರು ನಗರದ ರಸ್ತೆ ಗುಂಡಿಗಳು ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ನಗರದಲ್ಲಿರುವ ಗುಂಡಿಗಳಿಂದ ಬೇಸತ್ತ ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್‌ಫಾರ್ಮ್ ಬ್ಲಾಕ್‌ಬಕ್ ಸಹ-ಸಂಸ್ಥಾಪಕ ರಾಜೇಶ್ ಯಾಬಾಜಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಅವರು ರಾಜೇಶ್ ಯಾಬಾಜಿಗೆ ಆಂಧ್ರ ಪ್ರದೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.
ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್‌ಫಾರ್ಮ್ ಬ್ಲಾಕ್‌ಬಕ್ ಸಹ-ಸಂಸ್ಥಾಪಕ ರಾಜೇಶ್ ಯಾಬಾಜಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಬೆಳ್ಳಂದೂರು ಕಳೆದ 9 ವರ್ಷಗಳಿಂದ ನಮ್ಮ ಕಚೇರಿ ಹಾಗೂ ಮನೆಯಾಗಿದೆ. ಆದರೆ ಈಗ ಇಲ್ಲಿ ಇದೀಗ ಉಳಿದುಕೊಳ್ಳುವುದು ತುಂಬಾ ಕಷ್ಟ. ನಾವು ಹೊರಹೋಗಲು ನಿರ್ಧರಿಸಿದ್ದೇವೆ ಎಂದಿದ್ದರು.
ಇದಕ್ಕೆ ಕಾರಣ ನೀಡಿರುವ ಅವರು, ಇಲ್ಲಿಗೆ ತಲುಪಲು ನನ್ನ ಸಹೋದ್ಯೋಗಿಗಳಿಗೆ ಸರಾಸರಿ ಪ್ರಯಾಣ ಒಂದುವರೆ ಗಂಟೆಗಳವರೆಗೆ ಪ್ರಮಾಣ ಮಾಡಬೇಕಾಗುತ್ತದೆ. ಅಲ್ಲದೆ, ರಸ್ತೆ ಹೊಂಡಗಳು ಮತ್ತು ಧೂಳಿನಿಂದ ತುಂಬಿರುವ ರಸ್ತೆಗಳು ಸಮಸ್ಯೆ ಆಗುತ್ತಿವೆ. ಇದನ್ನು ಸರಿಪಡಿಸುವ ಕೆಲಸ ಆಗುತ್ತಿಲ್ಲ. ಮುಂದಿನ 5 ವರ್ಷಗಳಲ್ಲಿ ಬದಲಾವಣೆ ನಿರೀಕ್ಷೆ ಅಸಾಧ್ಯ ಎಂದಿದ್ದರು.
ಉದ್ಯಮಿ ರಾಜೇಶ್ ಯಾಬಾಜಿಗೆ ಆಂಧ್ರದ ಸಚಿವ ನಾರಾ ಲೋಕೋಶ್ ಆಹ್ವಾನ : ರಾಜೇಶ್ ಯಾಬಾಜಿ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರಕ್ಕೂ ಇದು ತೀವ್ರ ಮುಜುಗರ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್, ಎಕ್ಸ್ ಖಾತೆ ಮೂಲಕ ಆಹ್ವಾನ ನೀಡಿದ್ದಾರೆ.
ಕೂಡಲೇ ಕಂಪನಿಯನ್ನ ತಮ್ಮ ರಾಜ್ಯಕ್ಕೆ ಆಹ್ವಾನಿಸುತ್ತಿದ್ದೇನೆ. ನೀವು ನಿಮ್ಮ ಕಂಪನಿಯನ್ನು ವೈಜಾಗ್‌ಗೆ ಸ್ಥಳಾಂತರಿಸಬಹುದು. ನಾವು ಭಾರತದ ಟಾಪ್ 5 ಸ್ವಚ್ಛ ನಗರಗಳಲ್ಲಿ ಒಂದೆಂದು ರೇಟಿಂಗ್ ಪಡೆದಿದ್ದೇವೆ. ಅತ್ಯುತ್ತಮ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ . ಮಹಿಳೆಯರಿಗೆ ಸುರಕ್ಷಿತ ನಗರವೆಂದು ರೇಟಿಂಗ್ ಪಡೆದಿದ್ದೇವೆ. ನಿಮಗೆ ಆಸಕ್ತಿ ಇದ್ದರೆ ದಯವಿಟ್ಟು ನನಗೆ ಮೆಸೇಜ್ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಇಬ್ಬರು ಗಾಂಜಾ ಆರೋಪಿಗಳಿಗೆ 10 ವರ್ಷ ಜೈಲು, 1 ಲಕ್ಷ ದಂಡ – NDPS ವಿಶೇಷ ನ್ಯಾಯಾಲಯದಿಂದ ಆದೇಶ!







