ಕಲಬುರಗಿ : 78ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಿನ್ನಲೆ ಸಿಎಂ ಸಿದ್ದರಾಮಯ್ಯ ಇಂದು ಕಲಬುರಗಿಗೆ ಭೇಟಿ ನೀಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಈ ಭಾಗದ ಅಭಿವೃದ್ದಿಗೋಸ್ಕರ ಕೆಕೆಆರ್ಡಿಬಿಗೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಲಾಗಿದೆ. ಜೊತೆಗೆ ಕೋಟ್ಯಂತರ ರೂ. ಯೋಜನೆಗಳಿಗೆ ಅನುದಾನ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ಉತ್ಸವ ದಿನವೇ ಭರ್ಜರಿ ಕೊಡುಗೆ ನೀಡಿದ ಸಿಎಂ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತ್ಯೇಕ ಸಚಿವಾಲಯಕ್ಕೆ ಆದೇಶ ಹೊರಡಿಸಿದ್ದಾರೆ. ಈ ಇಲಾಖೆ ಯೋಜನೆ ಮತ್ತು ಸಾಂಖ್ಯಿಕ ಸಚಿವರ ಅಧೀನದಲ್ಲಿ ಕಾರ್ಯನಿರ್ವಹಣೆಗೆ ಆದೇಶಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯವರು ಈ ನೂತನ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ.

ಕಲಬುರಗಿ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಲ್ಯಾಣ ಕರ್ನಾಟಕ ಭಾಗದಲ್ಲಿ 350 ಕೆಪಿಎಸ್ ಶಾಲೆ ನಿರ್ಮಾಣವಾಗುತ್ತಿದೆ. 7 ಜಿಲ್ಲೆಗಳಲ್ಲಿ 204 ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯಗಳು, ಜಿಲ್ಲೆಯಲ್ಲಿ 2,515 ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಈ ಭಾಗದ ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆ ತಯಾರಿಕೆಗೆ ವಿಶೇಷ ತರಬೇತಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಕಲಬುರಗಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿಮ್ಹಾನ್ಸ್ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕಾಗಿ 220 ಕೋಟಿ ರೂ. ಅಲ್ಲದೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದೇವೆ. ಇಂದು 9 ಕೋಟಿ ರೂ. ವೆಚ್ಚದಲ್ಲಿ ಕೆಕೆಆರ್ಡಿಬಿ ಹಾಟ್೯ ಲೈನ್ಗೆ ಚಾಲನೆ ನೀಡುತ್ತಿದ್ದೇವೆ. ಆ ಮೂಲಕ ಕಲಬುರಗಿಯನ್ನ ಪ್ರಾದೇಶಿಕ ಹೆಲ್ತ್ ಹಬ್ ನಿರ್ಮಾಣ ಮಾಡುವ ಗುರಿಯತ್ತ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.

ಕಲಬುರಗಿ ರೊಟ್ಟಿಯನ್ನು ಜಾಗತಿಕ ಬ್ರ್ಯಾಂಡ್ ಮಾಡಿದ್ದೇವೆ. ಕೊಪ್ಪಳದಲ್ಲಿ ತೋಟಗಾರಿಕೆ ಟೆಕ್ಪಾರ್ಕ್ ನಿರ್ಮಾಣ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿಗೆ ಮಾಡುವ ಉದ್ದೇಶದಿಂದ ಹಸಿರು ಪಥ ಯೋಜನೆಗೆ 100 ಕೋಟಿ ರೂ. ನೀಡಿದ್ದೇವೆ. 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಗ್ರಾಮೀಣ ರಸ್ತೆ ನಿರ್ಮಾಣಕ್ಕಾಗಿ ಕಲ್ಯಾಣ ಪಥ ಯೋಜನೆ ಆರಂಭಿಸಿದ್ದೇವೆ. ಏಳು ಜಿಲ್ಲೆಗಳ ಹೊಸ ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡುತ್ತಿದ್ದೇವೆ. ಕಲಬುರಗಿಯನ್ನ ಕ್ರೀಡಾ ನಗರಿಯನ್ನಾಗಿ ಮಾಡುವುದಕ್ಕಾಗಿ 18 ಕೋಟಿ ರೂ ನೀಡಲಾಗಿದೆ. ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಟ್ಟಿದ್ದು, ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ : ಚಾಮರಾಜನಗರದಲ್ಲಿ ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು!







