ಸಿಎಂ ಸಿದ್ದರಾಮಯ್ಯ ಫೋಟೋ ಬಳಸಿ ಕೋಮು ಪ್ರಚೋದನೆ – ಮಹೇಶ್ ವಿಕ್ರಂ ಹೆಗ್ಡೆ ಅರೆಸ್ಟ್!

ಮಂಗಳೂರು : ಸಿಎಂ ಸಿದ್ದರಾಮಯ್ಯ ಪೋಟೋ ಬಳಸಿ ಕೋಮು ಪ್ರಚೋದನೆ ಆರೋಪದಡಿ ಪೋಸ್ಟ್ ಕಾರ್ಡ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆಯನ್ನು ಮೂಡಬಿದಿರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೂಡಬಿದಿರೆ PSI ಕೃಷ್ಣಪ್ಪ ಎಂಬುವವರ ದೂರಿನಡಿ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿಕೊಂಡು ಮಹೇಶ್ ವಿಕ್ರಂ ಹೆಗ್ಡೆಯನ್ನು ಬಂಧಿಸಿದ್ದಾರೆ. ಮಹೇಶ್ ವಿಕ್ರಂ ಹೆಗ್ಡೆ​ಯನ್ನು ಕೋರ್ಟ್​ಗೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಸೋಮವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪೋಟೋ ಬಳಸಿ ಕೋಮು ಪ್ರಚೋದನೆ ಆರೋಪದ ಹಿನ್ನೆಲೆ ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಆದೇಶದಂತೆ ಎಫ್ಐಆರ್ ದಾಖಲಾಗಿದೆ.

ಸಿಎಂ ಸಿದ್ದರಾಮಯ್ಯ ಫೋಟೋವನ್ನು ಎಡಿಟ್ ಮಾಡಿ ಕೋಮು ಪ್ರಚೋದನೆ ನೀಡಿರುವ ಆರೋಪ ಕೇಳಿಬಂದಿದೆ. “ಮಾನ್ಯ ಮುಖ್ಯಮಂತ್ರಿಗಳೇ, ಒಂದೇ ಒಂದು ಬಾರಿ ಗಣಪನ ಮೆರವಣಿಗೆಯ ಮೇಲೆ ಕಲ್ಲು ತೋರಿದವರ ಮಸೀದಿಯ ಮೇಲೆ ಬುಲ್ಡೋಜರ್ ನುಗ್ಗಿಸುವ ಧೈರ್ಯ ಮಾಡಿ ನೋಡಿ’. ‘ಮುಂದಿನ ವರ್ಷ ರಾಜ್ಯದ ಯಾವ ಮೂಲೆಯಲ್ಲೂ ಇಂಥಹ ಪ್ರಕರಣ ಮರುಕಳಿಸಲ್ಲ’ ಎಂದು ಮಹೇಶ್ ವಿಕ್ರಂ ಹೆಗ್ಡೆ ಪೋಸ್ಟ್ ಮಾಡಿದ್ದರು.

ಎರಡು ಧರ್ಮಗಳ ನಡುವೆ ವೈರತ್ವ ಮತ್ತು ದ್ವೇಷ ಭಾವನೆ ಮೂಡಿಸಿ ಕೋಮುಗಲಭೆ ಸೃಷ್ಟಿಸುವಂತಹ ಹಾಗೂ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸುವ ಉದ್ದೇಶದಿಂದ ಪೋಸ್ಟ್ ಹಾಕಿದ ಆರೋಪವಿದ್ದು, ಈ ಸಂಬಂಧ ಮಹೇಶ್ ವಿಕ್ರಂ ಹೆಗ್ಡೆ ವಿರುದ್ಧ ಬಿಎನ್ಎಸ್ 353(2) ಅಡಿ ಸೆ.9ರಂದು ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ : ಟೇಕಾಫ್‌ ವೇಳೆ ಕಳಚಿದ ಸ್ಪೈಸ್‌ಜೆಟ್ ಚಕ್ರ – ಮುಂಬೈನಲ್ಲಿ ಸೇಫ್‌ ಲ್ಯಾಂಡಿಂಗ್‌!

Btv Kannada
Author: Btv Kannada

Read More