ಪದ್ಮಭೂಷಣ ಡಾ. ಬಿ. ಸರೋಜಾದೇವಿಗೆ ಚಿತ್ರರಂಗದಿಂದ ಭಾವಪೂರ್ಣ ಶ್ರದ್ಧಾಂಜಲಿ!

ಕಳೆದ ತಿಂಗಳು ನಮ್ಮಿಂದ ದೂರವಾದ ಹಿರಿಯ ನಟಿ, ಅಭಿನಯ ಸರಸ್ವತಿ, ಪದ್ಮಭೂಷಣ ಡಾ. ಬಿ. ಸರೋಜಾದೇವಿ ಅವರ ಆತ್ಮಕ್ಕೆ ಶಾಂತಿ ಕೋರಲು ಇತ್ತೀಚಿಗೆ ಚಾಮರಾಜ ಪೇಟೆಯ ಕಲಾವಿದರ ಸಂಘದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಕ್ ಲೈನ್ ವೆಂಕಟೇಶ್ ಅವರ ಮುಂದಾಳತ್ವದಲ್ಲಿ ನಡೆದ ಈ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಲಾವಿದರ ಸಂಘ ಮುಂತಾದ ಚಿತ್ರರಂಗದ ಸಂಘಟನೆಗಳಿಂದ ಆಯೋಜನೆ ಮಾಡಲಾಗಿತ್ತು. ಸರೋಜಾದೇವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಸರೋಜಾದೇವಿ ಅವರು ನಡೆದು ಬಂದ ದಾರಿಯ ವಿಡಿಯೋ ಪ್ರದರ್ಶನ ಮಾಡಲಾಯಿತು.

ಈ ಸಂದರ್ಭದಲ್ಲಿ ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಅವರು, ಈ ಕಾರ್ಯಕ್ರಮವನ್ನು ಕಲಾವಿದರ ಸಂಘದಲ್ಲಿ ನಡೆಸಲು ಕಾರಣವಿದೆ. ಈ ಕಟ್ಟಡ ಆಗಲು ಸರೋಜಮ್ಮನವರ ಶ್ರಮ ಕೂಡ ತುಂಬಾ ಇದೆ. ಇಡೀ ಚಿತ್ರರಂಗ ಒಂದು ಕುಟುಂಬವಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ಬೇರೆ ಬೇರೆ ಚಿತ್ರರಂಗದಿಂದ ನಟರಾದ ನಾಸರ್, ಕಲಾವತಿ ಆಗಮಿಸಿದ್ದಾರೆ. ರಾಜ್ ಕುಮಾರ್ ಅವರ ಕನಸು ಕಲಾವಿದರ ಭವನ ಕಟ್ಟುವುದು ಆಗಿತ್ತು. ಅದನ್ನು ಅಂಬರೀಶ್ ಅವರು ನನಸು ಮಾಡಿದರು. ಈ ಭವನ ಕಟ್ಟಲು ಸರೋಜಾದೇವಿ ಅವರು ಅಧ್ಯಕ್ಷರಾಗಿದ್ದರು ಎಂದು ತಮ್ಮ ಹಾಗೂ ಸರೋಜಾದೇವಿ ಅವರ ಒಡನಾಟ ನೆನೆದು ಬಾವುಕರಾದರು.

ನಂತರ ಸುಮಲಾತಾ ಅಂಬರೀಶ್ ಅವರು, ಸರೋಜಮ್ಮನವರ ಬಗ್ಗೆ ಮಾತನಾಡಲು ನಾವು ಚಿಕ್ಕವರು. ಚಿತ್ರರಂಗದಲ್ಲಿ ಛಾಪನ್ನು ಮೂಡಿಸಿದವರು. ಇಂದಿಗೂ ದೇಶ ವಿದೇಶಗಳಲ್ಲೂ ಅವರ ಹಾಡುಗಳನ್ನು ಇಷ್ಟ ಪಡುತ್ತಾರೆ. ಅವರು ಯಾವಾಗಲೂ ಚಿಕ್ಕ ಮಕ್ಕಳ ತರ ಇರತಾ ಇದ್ದರು. ಅಂಬರೀಶ್ ಅವರನ್ನು ತಮ್ಮನ ತರ ನೋಡುತ್ತಾ ಇದ್ದರು. ಅವರು ತುಂಬಾ ಚೆನ್ನಾಗಿ ಪ್ರೊಫೆಷನಲ್ ಹಾಗೂ ಪರ್ಸನಲ್ ಲೈಫ್ ಕ್ಯಾರಿ ಮಾಡಿದರು. ಇದು ಎಲ್ಲರಿಗೂ ಮಾದರಿ ಆಗಬೇಕು. ಈ ಭವನ ಮಾಡಲು ರಾಜ್​ಕುಮಾರ್ ಹಾಗೂ ಅಂಬರೀಶ್ ಅವರಂತೆಯೇ ಸರೋಜಾದೇವಿ ಅವರ ಶ್ರಮ ಕೂಡ ಇದೆ. ಇಂತಹ ಭವನ ಇಡೀ ಇಂಡಿಯಾದಲ್ಲಿಯೇ ಇಲ್ಲ. ಇಂತಹ ಭವನವನ್ನು ಕಲಾವಿದರು ಚೆನ್ನಾಗಿ ಬಳಸಿಕೊಂಡು, ಮುಂದುವರೆಸಿಕೊಂಡು ಹೋಗಬೇಕು ಎಂದರು. ಚೆನ್ನೈನಿಂದ ಆಗಮಿಸಿದ್ದ ಬಹು ಭಾಷಾ ನಟ ನಾಸರ್ ತಮ್ಮ ಹಾಗೂ ಸರೋಜಾದೇವಿ ಅವರ ಒಡನಾಟದ ನೆನಪುಗಳು ಮೆಲುಕು ಹಾಕಿದರು.

ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಅನು ಪ್ರಭಾಕರ್, ರಘು ಮುಖರ್ಜಿ, ನೆನಪಿರಲಿ ಪ್ರೇಮ್, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ಗಿರಿಜಾ ಲೋಕೇಶ್ ಮುಂತಾದವರು ಭಾಗವಹಿಸಿ ಅನುಭವ ಹಂಚಿಕೊಂಡರು. ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಸರೋಜಾದೇವಿ ಅವರ ಪುತ್ರಿ ಹಾಜರಿದ್ದರು.

ಇದನ್ನೂ ಓದಿ : ಸುಧಾಕರ್ ಹೆಸರು ಬರೆದಿಟ್ಟು ಡ್ರೈವರ್ ಆತ್ಮಹತ್ಯೆ ಕೇಸ್ – ಮೃತ ಬಾಬು ಮನೆಗೆ ಪ್ರದೀಪ್‌ ಈಶ್ವರ್‌ ಭೇಟಿ.. ಕುಟುಂಬಸ್ಥರಿಗೆ ಉದ್ಯೋಗದ ಭರವಸೆ!

Btv Kannada
Author: Btv Kannada

Read More