ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿ ಕಚೇರಿ ಆವರಣದಲ್ಲಿ ಡ್ರೈವರ್ ಬಾಬು ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇಂದು ಮೃತ ಬಾಬು ನಿವಾಸಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮಕ್ಕೆ ಭೇಟಿ ನೀಡಿ ಮೃತ ಬಾಬು ಪತ್ನಿ ಶಿಲ್ಪಾ ಹಾಗೂ ತಾಯಿ ಕಾಳಮ್ಮ ಸೇರಿದಂತೆ ಸಹೋದರ ಲೋಕೇಶ್‌ಗೆ ಧೈರ್ಯ ಹೇಳಿದರು. ಈ ವೇಳೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರದೀಪ್ ಈಶ್ವರ್, ಸಂಸದ ಸುಧಾಕರ್‌ಗೆ ಸವಾಲೆಸೆದಿದ್ದಾರೆ.
ಮೃತ ಬಾಬು ಪತ್ನಿ ಶಿಲ್ಪಾಗೆ ಸರ್ಕಾರಿ ಕೆಲಸ ಕೊಡಿಸುವಂತೆ ಸಂಬಂಧಿಕರು ಪ್ರದೀಪ್ ಈಶ್ವರ್‌ಗೆ ಬೇಡಿಕೆ ಇಟ್ಟಿದ್ದು, ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು. ತಾಯಿ ಕಾಳಮ್ಮಗೆ ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಕಚೇರಿಯೊಂದರಲ್ಲಿ ಕೆಲಸ ಕೊಡಿಸುವ ಭರವಸೆ ಕೊಟ್ಟರು. ಸಹೋದರ ಲೋಕೇಶ್‌ಗೂ ಹೃದಯ ಸಂಬಂಧಿ ಸಮಸ್ಯೆ ಇದೆ ಅಂತ ತಿಳಿದು ಅವರ ಆರೋಗ್ಯಕ್ಕಾಗಿ ಸಹಾಯ ಹಾಗೂ ಕೆಲಸ ಕೊಡಿಸುವುದಾಗಿ ಹೇಳಿದರು. ಸರ್ಕಾರದಿಂದ SC/ST ದೌರ್ಜನ್ಯ ಪ್ರಕರಣದಡಿ ಬರುವ 8 ಲಕ್ಷ ರೂಪಾಯಿ ಪರಿಹಾರವನ್ನ ಅದಷ್ಟು ಬೇಗ ಕೊಡಿಸುತ್ತೇನೆ. ವೈಯುಕ್ತಿಕವಾಗಿ ಅರ್ಥಿಕವಾಗಿಯೂ ಸಹ ಕುಟುಂಬದ ಜೊತೆ ನಿಲ್ಲುವುದಾಗಿ ತಿಳಿಸಿದರು.
ಇದೇ ವೇಳೆ ಸಂಸದ ಸುಧಾಕರ್ ಹೆಸರನ್ನು FIRನಲ್ಲಿ ಸೇರಿಸೋಕೆ ಬಿಜೆಪಿ ನಾಯಕರ ಆಕ್ಷೇಪಕ್ಕೆ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರಿಗೆ ಕಾಮನ್‌ಸೆನ್ಸ್ ಇಲ್ಲ. ಗೌರಿಬಿದನೂರಿಗೆ ಬಂದು ಸುದ್ದಿಗೋಷ್ಠಿ ಮಾಡುವ ಬದಲು ಬಾಬು ಮನೆಗೆ ಬಂದು ಕಣ್ಣೀರು ಒರೆಸಬಹುದಿತ್ತಲ್ಲ? ಸಂಸದ ಸುಧಾಕರ್ ಅವರೇ, ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲ ಅಂದ್ರೆ ನಿಮ್ಮದೇ ಕೇಂದ್ರ ಸರ್ಕಾರ ಇದೆಯಲ್ಲ. ಸಿಬಿಐ ತನಿಖೆ ಮಾಡಿಸಿ ಆರೋಪದಿಂದ ಮುಕ್ತರಾಗಿ ಎಂದು ಸವಾಲು ಹಾಕಿದರು.
ಮಗನ ನೆನೆದು ಕುಟುಂಬಸ್ಥರು ಶಾಸಕರ ಎದುರು ಕಣ್ಣೀರಿಟ್ಟರು. ಬಿಜೆಪಿಯವರು ಆರೋಪ ಮಾಡಿದಂತೆ ನಾವು ಯಾರು ಕೂಡ ಒತ್ತಡದಿಂದ ದೂರು ದಾಖಲಿಸಿಲ್ಲ. ನಮ್ಮ ಮಗ ಬರೆದಿರುವ ಡೆತ್‌ನೋಟ್ ಆಧಾರದ ಮೇಲೆಯೇ ದೂರು ನೀಡಿದ್ದೇವೆ. ರಾಜಕಾರಣಕ್ಕೂ ನಮಗೂ ಸಂಬಂಧ ಇಲ್ಲ ಎಂದು ಮೃತ ಬಾಬು ತಾಯಿ ಕಾಳಮ್ಮ ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ.. BWSSB ಕಾರ್ಮಿಕರ ಸಭೆಯಲ್ಲಿ ಹಿರಿಯ ವಕೀಲ ಎಸ್. ಬಾಲನ್ ಆಗ್ರಹ!







