ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 336 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದು, ಈ ಮೂಲಕ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಕಳೆದ 58 ವರ್ಷಗಳಿಂದ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಸಿಕ್ಕಿರಲಿಲ್ಲ. ಇದೀಗ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.
2ನೇ ಇನ್ನಿಂಗ್ಸ್‌ನಲ್ಲಿ 608 ರನ್‌ಗಳ ಗುರಿಯನ್ನು ಪಡೆದ ಇಂಗ್ಲೆಂಡ್ 5ನೇ ದಿನದಾಟದಲ್ಲಿ ಒಟ್ಟು 68.1 ಓವರ್‌ಗಳಲ್ಲಿ 271 ರನ್‌ಗಳಿಸಿ ಸರ್ವಪತನ ಕಂಡಿತು. ಭಾರತದ ಈ ಗೆಲುವಿನಲ್ಲಿ ನಾಯಕ ಶುಭ್ಮನ್ ಗಿಲ್ ಬ್ಯಾಟಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿದರೆ, ಬೌಲಿಂಗ್ನಲ್ಲಿ ಭಾರತದ ಪರ ಆಕಾಶ್ ದೀಪ್ ಮೊದಲ ಬಾರಿಗೆ 6 ವಿಕೆಟ್ ಕಿತ್ತು ದಾಖಲೆ ಬರೆದಿದ್ದಾರೆ. ಹಾಗೆಯೇ ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ದಾರೆ.
2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕ್ಯಾಪ್ಟನ್ ಗಿಲ್ ಅವರ ದ್ವಿಶತಕದಿಂದ 587 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 407 ರನ್ಗೆ ಆಲೌಟ್ ಆಗಿತ್ತು.
ಇದರಿಂದ ಟೀಮ್ ಇಂಡಿಯಾ 180 ರನ್‌ಗಳ ಮುನ್ನಡೆ ಪಡೆದುಕೊಂಡು 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿತ್ತು. ಈ ಇನ್ನಿಂಗ್ಸ್ನಲ್ಲೂ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಆಟಗಾರರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ 161 ರನ್ಗಳನ್ನು ಬಾರಿಸಿದ್ದರು. ಎಲ್ಲರ ರನ್‌ಗಳ ಕೊಡುಗೆಯಿಂದ ಭಾರತ 6 ವಿಕೆಟ್ಗೆ 427 ರನ್ಗೆ ಡಿಕ್ಲೇರ್ ಮಾಡಿಕೊಂಡಿತ್ತು.
ಒಟ್ಟು 608 ರನ್‌ಗಳ ಟಾರ್ಗೆಟ್ ಪಡೆದುಕೊಂಡಿದ್ದ ಇಂಗ್ಲೆಂಡ್ ಆಟಗಾರರು 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಪತರಗುಟ್ಟಿದರು. ಕೊನೆ ಇನ್ನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್ ಮಾಡಿದ ಆಕಾಶ್ ದೀಪ್ 6 ವಿಕೆಟ್ಗಳನ್ನ ಪಡೆದು ಮಿಂಚಿದರು. ಇದರಿಂದ ಇಂಗ್ಲೆಂಡ್ ಕೇವಲ 271 ರನ್ ಮಾತ್ರ ಗಳಿಸಲು ಶಕ್ತವಾಯಿತು. ಇದರಿಂದ ಟೀಂ ಇಂಡಿಯಾ 336 ರನ್‌ಗಳ ಅಂತರದಿಂದ ಅಮೋಘವಾದ ಗೆಲುವು ಪಡೆದು ಸಂಭ್ರಮಿಸಿದೆ.
ಇದನ್ನೂ ಓದಿ : ಮೈಸೂರಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಪ್ರಮುಖರ ಸಭೆ – ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ!
