ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಹಿಳೆಯರಿಗೆ ಸೇಫ್ಟಿ ಇಲ್ಲದಂತಾಗಿದೆ. ಸಣ್ಣ-ಪುಟ್ಟ ಕಂಪನಿ ಅಲ್ಲ ಐಟಿ-ಬಿಟಿಯಲ್ಲೂ ಮಹಿಳೆಯರಿಗೆ ಕಿರುಕುಳಗಳು ತಪ್ಪಿಲ್ಲ. ಹೌದು.. ಪ್ರತಿಷ್ಠಿತ ಐಟಿ ಕಂಪನಿಯಾಗಿರುವ ಇನ್ಫೋಸಿಸ್ ಉದ್ಯೋಗಿಯೊಬ್ಬ ಆಫೀಸ್ನಲ್ಲೇ ನೀಚ ಕೃತ್ಯವೆಸಗಿ ಸಿಕ್ಕಿಬಿದ್ದಿದ್ದು, ರಹಸ್ಯವಾಗಿ ಮಹಿಳಾ ಸಹದ್ಯೋಗಿಗಳ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡ್ತಿದ್ದ ಉದ್ಯೋಗಿಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಆಂದ್ರಪ್ರದೇಶ ಮೂಲದ ಸ್ವಪ್ನಿಲ್ ನಾಗೇಶ್ ಮಲಿ (28) ಬಂಧಿತ ಆರೊಪಿ.

ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಹೀಲೆಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಸೀನಿಯರ್ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸ್ವಪ್ನಿಲ್, ಜೂನ್ 30ರಂದು ಮಹಿಳಾ ಉದ್ಯೋಗಿ ಶೌಚಾಲಯಕ್ಕೆ ಹೋಗಿದ್ದಾಗ ಕದ್ದು ವಿಡಿಯೋ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮಹಿಳೆ ಕೊಟ್ಟ ದೂರಿನ ಮೇರೆಗೆ ಸದ್ಯ ಪೊಲೀಸರು ಸ್ವಪ್ನಿಲ್ ನನ್ಜು ಬಂಧಿಸಿದ್ದು, ತನಿಖೆ ವೇಳೆ ಈತನ ಮೊಬೈಲ್ ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಜೂನ್ 30ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಮಹಿಳೆ ಟಾಯ್ಲೆಟ್ ಹೋಗಿದ್ದ ವೇಳೆ ಮೇಲಿಂದ ಯಾರೋ ರೆಕಾರ್ಡ್ ಮಾಡುತ್ತಿರುವ ರೀತಿ ಎದುರಿನ ಡೋರ್ನಲ್ಲಿ ಪ್ರತಿಬಿಂಬ ಕಂಡಿದೆ. ಎಚ್ಚೆತ್ತ ಮಹಿಳೆ ಹೊರಗೆ ಬಂದು ನೋಡಿದ್ದಾಳೆ. ಓರ್ವ ಯುವತಿ ಮಾತ್ರ ಕಂಡಿದ್ದಾಳೆ. ಇನ್ನೂ ಅನುಮಾನ ಪರಿಹರಿಸಿಕೊಳ್ಳಲು ಮತ್ತೆ ಟಾಯ್ಲೆಟ್ ಹೋಗಿ ಕೆಲ ಹೊತ್ತು ಮಹಿಳೆ ಕಾದಿದ್ದಾಳೆ. ಅಷ್ಟೊತ್ತಿಗೆ ಆರೋಪಿ ಪ್ಯಾಂಟ್ ಬಿಚ್ಚಿ ಕಮೊಡ್ ಮೇಲೆ ನಿಂತು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡಿದ್ದು, ಕೂಡಲೇ ಆ ಮಹಿಳೆ ಜೋರಾಗಿ ಕಿರುಚಾಡಿದಾಗ, ಭಯಭೀತನಾದ ಸ್ವಪ್ನಿಲ್ ಆಕೆಯ ಬಳಿ ಕ್ಷಮೆ ಕೇಳಿದ್ದಾನೆ. ಅಷ್ಟರೊಳಗೆ ಘಟನಾ ಸ್ಥಳಕ್ಕೆ ಎಚ್‌ಆರ್ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮೊಬೈಲ್‌ನಲ್ಲಿ 30ಕ್ಕೂ ಹೆಚ್ಚು ಮಹಿಳೆಯರ ವಿಡಿಯೋಗಳು ಇರುವುದು ಪತ್ತೆಯಾಗಿದೆ. ಇದನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಸಂಸ್ಥೆಯ ಆಡಳಿತ ಮಂಡಳಿ ಮುಜುಗರದ ನೆಪದಲ್ಲಿ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದು, ಕೇವಲ ಕ್ಷಮೆ ಕೇಳಿಸಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನಲಾಗಿದೆ. ಆದ್ರೆ ನೊಂದ ಮಹಿಳೆ ಪತಿಗೆ ವಿಚಾರ ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಮಹಿಳೆಯ ಪತಿ, ಪ್ರತಿಷ್ಠಿತ ಸಂಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಇಷ್ಟೇನಾ ರಕ್ಷಣೆ ಎಂದು ಕ್ಯಾಂಪಸ್ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು ಇಲ್ಲದಿದ್ದರೆ ಬೇರೆ ಹೆಣ್ಣು ಮಕ್ಕಳಿಗೆ ಇದೇ ರೀತಿ ಕಿರುಕುಳ ನೀಡುತ್ತಾನೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಹೆಚ್ಚಾದ ಮಳೆ ಅಬ್ಬರ.. ಇಂದು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!







