ಬೆಂಗಳೂರು : ಲೋಕಾಯುಕ್ತ ಡಿವೈಎಸ್ಪಿ ಎಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಹಾಗೂ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಲೋಕಾಯುಕ್ತ ಡಿವೈಎಸ್ಪಿ ಬಸವರಾಜು ಆರ್. ಮಗದಮ್ ದೂರು ದಾಖಲಿಸಿದ್ದು, ಸದ್ಯ ನಕಲಿ ಡಿವೈಎಸ್ಪಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಲೋಕಾಯುಕ್ತ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ಕರೆ : ಅಪರಿಚಿತ ನಂಬರ್ನಿಂದ ಕಾಲ್ ಮಾಡಿದ ವ್ಯಕ್ತಿಯೋರ್ವ, ನಾನು ಲೋಕಾಯುಕ್ತ ಡಿವೈಎಸ್ಪಿ ಎಂದು ಪರಿಚಯ ಮಾಡಿಕೊಂಡ ಬಳಿಕ ನಿಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್ ದಾಖಲಾಗುತ್ತಿದೆ ಎಂದು ಬೆದರಿಸಿ, ನಿಮ್ಮ ಮೇಲೆ ಕೇಸ್ ಹಾಕಬಾರದು ಅಂದ್ರೆ ಹಣ ನೀಡಿ ಅಂತ ಡಿಮ್ಯಾಂಡ್ ಮಾಡಿದ್ದ.
ಅನುಮಾನ ಬಂದು ಸರ್ಕಾರಿ ಅಧಿಕಾರಿಗಳು ಟ್ರೂ ಕಾಲರ್ನಲ್ಲಿ ಚೆಕ್ ಮಾಡಿದಾಗ ಲೋಕಾಯುಕ್ತ ಡಿವೈಎಸ್ಪಿ ಅಂತಲೇ ಹೆಸರು ಬಂದಿದ್ದು, ಹಲವು ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಸದ್ಯ ಎಚ್ಚೆತ್ತ ಲೋಕಾಯುಕ್ತ ಪೊಲೀಸರು, ಆ ನಂಬರ್ನ ಲೋಕೇಷನ್ ಟ್ರೆಸ್ ಮಾಡಿದ್ದಾರೆ. ನಂಬರ್ ಲೋಕೇಷನ್ ಮಹಾರಾಷ್ಟ್ರದ ಶೀರೋಲ್ ಎಂಬುದು ಗೊತ್ತಾಗಿದೆ. ಸದ್ಯ ಪ್ರಕರಣದ ತನಿಖೆ ಮುಂದುವರೆದಿದೆ.









