ಚಿಕ್ಕಮಗಳೂರು : ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಕ್ಕು ಗಾಯಗೊಂಡ ಹುಲಿ ಓಡಾಡುತ್ತಿದ್ದು, ಹುಲಿಯ ಸೊಂಟದಲ್ಲಿ ಉರುಳು ನೇತಾಡುತ್ತಿದೆ. ಇದರಿಂದ ಗಾಯಗೊಂಡ ಹುಲಿ, ನೋವಿನಿಂದಲೇ ಕಳೆದ ನಾಲ್ಕೈದು ದಿನಗಳಿಂದ ಓಡಾಡುತ್ತಿದೆ.

ಹುಲಿಗೆ ಅಕ್ರಮವಾಗಿ ಉರುಳು ಹಾಕಿ ಗಂಭೀರವಾಗಿ ಗಾಯಗೊಳಿಸಿದ್ದಕ್ಕೆ ಇದೀಗ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಹುಲಿಗೆ ಉರುಳು ಹಾಕಿರುವ ಅಪರಾಧಿಗಳ ವಿರುದ್ಧ ತಕ್ಷಣ ಅರಣ್ಯ ಅಪರಾಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು, ಗಾಯಗೊಂಡಿರುವ ಹುಲಿಯನ್ನು ಪತ್ತೆಹಚ್ಚಿ ವೈದ್ಯಕೀಯ ಚಿಕಿತ್ಸೆ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಉರುಳು ಹಾಕಿದ ವ್ಯಕ್ತಿಗಳು, ಸಂಘಟಿತ ಬೇಟೆಗಾರರು ಅಥವಾ ಸಂಬಂಧಿತ ಜಾಲವನ್ನು ಪತ್ತೆಹಚ್ಚಿ ಬಂಧಿಸಬೇಕು. ಸಂಬಂಧಿತ ವಲಯ ಮತ್ತು ವಿಭಾಗದ ಅಧಿಕಾರಿಗಳ ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯದ ಬಗ್ಗೆ ಇಲಾಖೆ ತನಿಖೆ ನಡೆಸಬೇಕು. ಅಕ್ರಮ ರೆಸಾರ್ಟ್, ಅಕ್ರಮ ರಸ್ತೆ ನಿರ್ಮಾಣ, ಉರುಳು ಬೇಟೆ ಹಾಗೂ ವನ್ಯಜೀವಿ ವಿರೋಧಿ ಚಟುವಟಿಕೆಗಳ ಕುರಿತು ವಿಶೇಷ ಪರಿಶೀಲನೆ ನಡೆಸಬೇಕು.

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇನ್ನು, ಮೂರ್ನಾಲ್ಕು ದಿನದಿಂದ ಹುಲಿ ಸೆರೆಗೆ ಅರಣ್ಯ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಕ್ಯಾಮೆರಾಗಳನ್ನು ಅಳವಡಿಸಿ ಹುಲಿಯ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ತೋಟದ ಕಾರ್ಮಿಕರು ಕೆಲಸಕ್ಕೆ ಹೋಗದಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ರಂಗಾಯಣ ರಘು 400ನೇ ಸಿನಿಮಾದ ಟೈಟಲ್ ರಿವೀಲ್ – ‘ಹೊಸ ಜೀವನ’ಕ್ಕೆ ಡಾಲಿ ಧನಂಜಯ್ ಸಾಥ್!









