ಬೆಂಗಳೂರು : ಬೆಂಗಳೂರು ಹಸಿರು ಮಾರ್ಗದ ಕೊನೆಯ ನಿಲ್ದಾಣವಾಗಿರುವ ಮಾದಾವರದಿಂದ ತುಮಕೂರುವರೆಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಈ ಮೆಟ್ರೋ ರೈಲು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ ಮಾಡಲಾಗಿದೆ.
ನಿನ್ನೆ ಸಂಜೆ ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಡಿಪಿಆರ್ ವರದಿ ಸ್ವೀಕರಿಸಿದ್ದಾರೆ. ಮಾದವಾರ-ತುಮಕೂರು ಮೆಟ್ರೋ ರೈಲು ಯೋಜನೆ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ಸಾಧ್ಯತೆ ಇದೆ. ಡಿಪಿಆರ್ ಅನ್ನು ಬಿಎಮ್‌ಆರ್‌ಸಿಎಲ್ ಸಿದ್ಧಪಡಿಸಿದೆ.
ಈ ಬಗ್ಗೆ ಡಾ. ಜಿ.ಪರಮೇಶ್ವರ್ ಮಾತನಾಡಿ, ತುಮಕೂರಿಗೆ ಮೆಟ್ರೋ ರೈಲು ಬೇಕು ಅನ್ನೋ ನಿಟ್ಟಿನಲ್ಲಿ ಬಹಳ ದಿನಗಳಿಂದ ಪ್ರಯತ್ನ ನಡೀತಿತ್ತು. ಕಳೆದ ಬಜೆಟ್‌ನಲ್ಲಿ ಫೀಸಿಬಿಲಿಟಿ ಅಧ್ಯಯನ ಮಾಡೋದಾಗಿ ಸಿಎಂ ಹೇಳಿದ್ರು. ಹೈದರಾಬಾದ್ ಸಂಸ್ಥೆಯಿಂದ 3.5 ಕೋಟಿ ರೂ. ಕರ್ಚು ಮಾಡಿ ವರದಿ ಪಡೆಯಲಾಗಿದೆ. ಈ ವರದಿಯಲ್ಲಿ ಮಾದಾವರ ಟು ತುಮಕೂರು ಮೆಟ್ರೋ ಯೋಜನೆ ಮಾಡಬಹುದು ಅಂತ ಹೇಳಲಾಗಿದೆ ಎಂದು ತಿಳಿಸಿದರು.
ಅದಾದ ನಂತರ ಡಿಪಿಆರ್ ವರದಿಗೆ ಟೆಂಡರ್ ಕೊಡಲಾಗಿತ್ತು. ಮೆಟ್ರೋದವ್ರೇ ಬೇರೊಂದು ಸಂಸ್ಥೆ ಮೂಲಕ ಡಿಪಿಆರ್ ವರದಿ ಸಿದ್ಧಪಡಿಸಿ ಕೊಟ್ಟಿದೆ. ಮೆಟ್ರೋ ಯೋಜನೆಯನ್ನು ಪಿಪಿಪಿ ಮಾಡೆಲ್‌ನಲ್ಲಿ ಮಾಡಲಾಗುತ್ತೆ. ಡಿಪಿಆರ್ ವರದಿಯಲ್ಲಿ 20 ಸಾವಿರ ಕೋಟಿ ಅಂದಾಜು ವೆಚ್ಚ ಹಾಕಲಾಗಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಂತರ ಟೆಂಡರ್ ಕರೆಯುತ್ತೇವೆ ಎಂದರು.
ಇದನ್ನೂ ಓದಿ : ಆನೇಕಲ್‌ನಲ್ಲಿ ಇಂದು ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ – ಕ್ರೀಡಾಂಗಣದ ವಿಶೇಷತೆಗಳೇನು?








